ಮಲೇರಿಯಾ ರೋಗ ತಡೆಗೆ ಮಾದರಿ ರೂಪಿಸಿ ಜಾಗೃತಿ ಮೂಡಿಸಿದ ವಿಧ್ಯಾರ್ಥಿಗಳು

ವಿಜಯಪುರ : ಮಲೇರಿಯಾ ರೋಗ ಬಾರದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಮಲೇರಿಯಾ ರೋಗ ಹರಡುವ ಬಗ್ಗೆ, ಯಾವ ರೀತಿ ಮಲೇರಿಯಾ ಸೊಳ್ಳೆಗಳು ತಮ್ಮ ಆಶ್ರಯ ತಾಣ ಮಾಡಿಕೊಳ್ಳುತ್ತವೆ ಹೀಗೆ ಅನೇಕ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮಾದರಿ ರೂಪಿಸಿ ಜಾಗೃತಿ ಮೂಡಿಸಿದರು.

ಇಂಡಿ ಪಟ್ಟಣದ ಏಂಜೆಲ್ಸ್ ಹಾಗೂ ಅನುದಾನಿತ ಕ್ರೈಸ್ತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಜಾಗೃತಿ ಮೂಡಿಸಿದರು.

ಖಾಲಿ ಡಬ್ಬ, ಟೈರ್, ಏರ್ ಕೂಲರ್ ಮೊದಲಾದವುಗಳ ಕಡೆ ಮಲೇರಿಯಾ ಹರಡುವ ಸೊಳ್ಳೆಗಳು ತಮ್ಮ ಆಶ್ರಯ ತಾಣ ಮಾಡಿಕೊಳ್ಳುತ್ತವೆ, ಹೀಗಾಗಿ ಅವುಗಳನ್ನು ಸ್ವಚ್ಛವಾಗಿರಿಸಿ ಎಂದು ಸಂದೇಶ ಸಾರುವ ಅನೇಕ ಮಾದರಿಗಳು ಪ್ರದರ್ಶನಗೊಂಡವು. ಮಲೇರಿಯಾ ರೋಗ ಹರಡುವ ಬಗೆ, ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಕುರಿತಾಗಿಯೂ ವಿದ್ಯಾರ್ಥಿಗಳು ವಿವರಿಸಿದರು.

ತಾಲೂಕಾ ಆರೋಗ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ ಮಾತನಾಡಿ, ಸೊಳ್ಳೆಗಳಿಂದ ಮಲೇರಿಯಾ ರೋಗ ಹರಡುತ್ತಿದ್ದು, ಸೊಳ್ಳೆಗಳನ್ನು ನಿಯಂತ್ರಿಸಿ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಮುಂದಾಗಬೇಕು ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಸ್ವಚ್ಛತೆ ಇಲ್ಲದೇ ಇದ್ದರೆ ಸೊಳ್ಳೆಗಳ ಉತ್ಪತ್ತಿಯಿಂದ ಮಾರಣಾಂತಿಕ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಎಲ್ಲರೂ ಸ್ವಚ್ಚತೆಯ ಬಗ್ಗೆ ಗಮನಹರಿಸಿದಾಗ ಮಾತ್ರ ನಿಯಂತ್ರಣ ಸಾಧ್ಯ ಎಂದರು.

ಶಿಕ್ಷಣ ಸಂಯೋಜಕರಾದ ಮಹೇಶ ಮಾತನಾಡಿ, ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಂಜೆ ಸೊಳ್ಳೆಗಳು ಹೆಚ್ಚುವುದರಿಂದ ರಾತ್ರಿ ವೇಳೆ ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಸೊಳ್ಳೆಗಳ ತಾಣವನ್ನು ಮೊದಲೇ ನಾಶಮಾಡಿ ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಆರ್.ಡಿ.ಈ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಿ.ಶಿರೋಮಣಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಳಗಿ, ಎಸ್.ಎಸ್. ಪತ್ತಾರ, ಮಂಜುನಾಥ ನಾಯ್ಕೋಡಿ, ಸಾಹಿತಿ ಸಂತೋಷ ಬಂಡೆ ಪಾಲ್ಗೊಂಡಿದ್ದರು.

Latest Indian news

Popular Stories