ಲೋಕಸಭೆ ಡಾ.ಬಾಬುರಾಜೇಂದ್ರ ನಾಯಿಕಗೆ ಬೆಂಬಲ*

ವಿಜಯಪುರ: ವಿಜಯಪುರ ಲೋಕಸಭಾ ಮೀಸಲು ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ, ಬಿಜೆಪಿಯ ಪ್ರಭಲ ಆಕಾಂಕ್ಷಿಯಾದ ಡಾ.ಬಾಬುರಾಜೇಂದ್ರ ನಾಯಿಕ ಅವರಿಗೆ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಸಂಪೂರ್ಣ ಬೆಂಬಲ ನೀಡಲು ತಿರ್ಮಾನಿಸಿದೆ ಎಂದು ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರವಿಕುಮಾರ ಬಿರಾದಾರ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಆಕಾಂಕ್ಷಿ ಡಾ.ಬಾಬು ರಾಜೇಂದ್ರನಾಯಿಕ ಅವರಿಗೆ ಪಕ್ಷದ ವರಿಷ್ಠರು ಟಿಕೆಟ್ ಅಂತಿಮಗೊಳಿಸಿದರೆ, ಅವರ ಗೆಲುವಿಗೆ ಸಂಘದ ಪ್ರತಿಯೊಬ್ಬ ಸದಸ್ಯರು ಬೆಂಬಲಕ್ಕೆ ನಿಂತು ಶ್ರಮಿಸಲಿದ್ದಾರೆ ಎಂದರು.

ಡಾ. ಬಾಬುರಾಜೇಂದ್ರ ನಾಯಿಕ ಬಿಜೆಪಿಯ ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕರಾಗಿ, ಜೊತೆಗೆ ಅನೇಕ ಸಮಾಜಮುಖಿ ಕೆಲಸಗಳಿಂದ ಜಿಲ್ಲೆಯ ಮನೆಮಾತಾಗಿದ್ದು, ಭರವಸೆಯ ನಾಯಕರಾಗಿ ಹೊರಹೊಮ್ಮಿದ್ದಾರೆ. ವಿಜಯಪುರದ ಬಹುತೇಕ ವೈದ್ಯರು ಡಾ. ಬಾಬುರಾಜೇಂದ್ರ ನಾಯಿಕ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದರು.

ಕೋವಿಡ್ ಸಂದರ್ಭದಲ್ಲಿ ನಾಯಿಕ ಅವರು ಕೊರೊನಾ ಪೀಡಿತ ರೋಗಿಗಳ ಪಾಲಿಗೆ ವರದಾನವಾಗಿ ಕೆಲಸ ಮಾಡಿದ್ದಾರೆ. ಕೊರೊನಾ ಬಾಧಿತರಿಗೆ ಆರೈಕೆ ಹಾಗೂ ಪರಿಹಾರ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಶ್ರೀ ತುಳಸಿಗಿರೀಶ ಪೌಂಡೇಶನ್ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬಡ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಪ್ರಾಮಾಣಿಕ ಸೇವೆಯನ್ನು ಇಡೀ ಜಿಲ್ಲೆಯ ಜನತೆ ಗುರುತಿಸಿದೆ ಎಂದರು.

ಐಎಂಎ ಜಂಟಿ ಕಾರ್ಯದರ್ಶಿ ಡಾ.ದಯಾನಂದ ಮಾತನಾಡಿ, ವಿಜಯಪುರ ಜಿಲ್ಲೆಯಾದ್ಯಂತ ಅನ್ನ ದಾಸೋಹದ ಮಾದರಿಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ನಿರಂತರ ಆರೋಗ್ಯ ದಾಸೋಹ ಮಾಡುತ್ತಿದ್ದಾರೆ. ಇದು ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿದೆ. ಬಿಜೆಪಿ ವರಿಷ್ಠರು ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸುವುದಾಗಿ ತಿಳಿಸಿದರು.

ಡಾ. ಸುರೇಶ ಮಾತನಾಡಿ, ಡಾ.ಬಾಬುರಾಜೇಂದ್ರ ನಾಯಿಕ ಪತ್ನಿ ಡಾ. ಶೀತಲ ನಾಯಕ ಅವರು ಹೃದ್ರೋಗ ತಜ್ಞರಾಗಿದ್ದು, ಅವರು ಕೂಡಾ ಪತಿಯ ಹೆಗಲಿಗೆ ಹೆಗಲು ಕೊಟ್ಟು, ನಿರಂತರ ಸಾಮಾಜಿಕ ಸೇವೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ನಾವೆಲ್ಲ ಡಾ. ನಾಯಿಕ ಅವರನ್ನು ಬೆಂಬಲಿಸುವುದರ ಮೂಲಕ ಅವರನ್ನು ಜಯಶಾಲಿಯನ್ನಾಗಿಸುವ ಶಪಥ ಸ್ವೀಕರಿಸಿದ್ದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಕಿರಣ ಓಸ್ವಾಲ್, ಡಾ. ಸಂತೋಷ ನ್ಯಾಮಗೌಡ, ಡಾ.ಅಶೋಕ ಬಿರಾದಾರ, ಡಾ.ಮಹೇಶ ಕರಿಗೌಡರ, ಡಾ.ಗಿರೀಶ ಪಾಟೀಲ, ಡಾ.ವಿಶ್ವನಾಥ ಪತ್ತಾರ, ಡಾ.ವೆಂಕಟೇಶ ಪಾಟೀಲ, ಡಾ.ಮಹೇಶ ಬಾಗಲಕೋಟ, ಡಾ.ಬಾಬು ಕಟ್ಟಿಮನಿ, ಡಾ.ರವಿ ಕುಲಕರ್ಣಿ, ಡಾ. ಬಾಬುರಾಜೇಂದ್ರ ಪತ್ನಿ ಡಾ. ಶೀತಲ ನಾಯಕ, ಡಾ.ಸುನೀಲ ಕಲ್ಲೂರ, ಡಾ.ಸಂಜೀವ, ಡಾ.ಹೀರಾ ಗೋಸಾವಿ ಸೇರಿದಂತೆ ಅನೇಕ ವೈದ್ಯರು ಇದ್ದರು.

Latest Indian news

Popular Stories