ವಿಜಯಪುರ : ಹಲವಾರು ವರ್ಷಗಳ ನಂತರ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಆರಂಭಗೊಂಡಿದೆ. ಒಂದು ಹಂತದಲ್ಲಿ ದಿವಾಳಿ ಹಂತಕ್ಕೆ ತಲುಪಿರುವ ಮಹಾನಗರ ಪಾಲಿಕೆಯ `ಸಾರಥ್ಯ’ವನ್ನು ವಹಿಸಿಕೊಂಡಿರುವ ನೂತನ ಮೇಯರ್ ಮೆಹಜಬೀನ್ ಅವರಿಗೆ ಹೂಮಳೆಯ ಸ್ವಾಗತ ದೊರಕಿದೆಯಾದರೂ ಪಾಲಿಕೆಯ ಸಮಸ್ಯೆಗಳ ಸುರಿಮಳೆ ತಪ್ಪಿದ್ದಲ್ಲ.
ನೂತನ ಮೇಯರ್ ಅವರಿಗೆ ದೊಡ್ಡ ಸವಾಲುಗಳು ಎದುರಾಗಿದ್ದು, ಯಾವ ರೀತಿ ಸಮಸ್ಯೆಯನ್ನು ನಿಭಾಯಿಸಲಿದ್ದಾರೆ ಎಂಬುದು ಜನತೆ ಕಾದು ನೋಡುವಂತಾಗಿದೆ.ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಮೆಹಜಬೀನ್ ಹೊರ್ತಿ ರಾಜಕೀಯ ರಂಗಕ್ಕೆ ಹೊಸಬರು, ಆದರೆ ಪತಿ ಅಬ್ದುಲ್ರಜಾಕ್ ಹೊರ್ತಿ ಅನುಭವಿ ರಾಜಕಾರಣಿ, ಅನೇಕ ಬಾರಿ ಪಾಲಿಕೆ ಸದಸ್ಯರಾಗಿಯೂ ಆಯ್ಕೆಯಾದವರು. ಪತಿಯ ಈ ಕಾರ್ಯವನ್ನು ಹತ್ತಿರದಿಂದ ಕಂಡಿರುವ ಮೆಹಜಬೀನ್ ಅವರಿಗೆ ಈ ಸವಾಲುಗಳು ಹೊಸತೇನಲ್ಲ. ಆದರೆ ಜಟಿಲವಾದ ಸಮಸ್ಯೆಗಳ ಪರಿಹಾರಕ್ಕೆ ಯಾವ ರೀತಿ ಮಾಸ್ಟರ್ಪ್ಲಾನ್ ರೂಪಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ.
ಕಳೆದ ವರ್ಷವೇ ಚುನಾವಣೆ ನಡೆದರೂ ಸಹ ಮೇಯರ್-ಉಪಮೇಯರ್ ಆಯ್ಕೆ ಪ್ರಕ್ರಿಯೆ ಹಾಗೂ ಪ್ರಮಾಣ ವಚನ ನಡೆಯಲು ಅನೇಕ ದಿನಗಳೇ ಬೇಕಾದವರು. ಹೀಗಾಗಿ ವಾರ್ಡ್ನಲ್ಲಿ ಪರೋಕ್ಷವಾಗಿ ಕೆಲಸ ಮಾಡುತ್ತಿದ್ದ ಸದಸ್ಯರಿಗೆ ಈಗ ಅಧಿಕೃತ ಸ್ಥಾನಮಾನ ದೊರಕಿದೆ, ಸಾಮಾನ್ಯ ಸಭೆ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಸದಸ್ಯರು ಕಾದು ಕುಳಿತಿದ್ದಾರೆ. ವರ್ಷಗಳಿಂಧ ಜನರ ಅಹವಾಲು ಸಲ್ಲಿಕೆಯಾಗುತ್ತಲೇ ಇದ್ದರೂ ಸಹ ಅದನ್ನು ಚರ್ಚಿಸಬೇಕಾದ ವೇದಿಕೆಯೇ ಪಾಲಿಕೆ ಸದಸ್ಯರಿಗೆ ಇರಲಿಲ್ಲ, ಈಗ ಅದಕ್ಕೆ ವೇದಿಕೆ ಸಜ್ಜಾದೊಡನೆ ತಮ್ಮ ವಾರ್ಡ್ ಸಮಸ್ಯೆಯನ್ನು ಚರ್ಚಿಸಲು ಅನೇಕ ಪಾಲಿಕೆ ಸದಸ್ಯರು ತಾಲೀಮು ನಡೆಸುವಲ್ಲಿ ನಿರತರಾಗಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಈಗ ಸವಾಲುಗಳ ಪರ್ವತವೇ ಎದುರಾಗಿದೆ. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಲಿಕೆಯಲ್ಲಿ ಪೌರಕಾರ್ಮಿಕರಿಗೆ ವೇತನ ನೀಡಿಕೆ, ಇಂದಿರಾ ಕ್ಯಾಂಟೀನ್ಗೆ ಅನುದಾನ ಹೀಗೆ ದೊಡ್ಡ ಮೊತ್ತದ ಅನುದಾನ ಅವಶ್ಯಕತೆ ಇದೆ. ಗ್ಯಾರಂಟಿ ಯೋಜನೆಯ ಉತ್ಸಾಹದಲ್ಲಿರುವ ರಾಜ್ಯ ಸರ್ಕಾರ ವಿಜಯಪುರ ಮಹಾನಗರ ಪಾಲಿಕೆಗೆ ವಿಶೇಷಾನುದಾನ ದೊರಕಿಸುವುದೋ ಇಲ್ಲವೋ ಎಂಬುದು ಸಹ ಅನುಮಾನ.
ಇಂತಹ ಸಂದರ್ಭದಲ್ಲಿ ಸಂಪನ್ಮೂಲಗಳ ಕ್ರೋಢಿಕರಣ ದೊಡ್ಡಮೊತ್ತದ ಸವಾಲಾಗಿ ಪರಿಗಣಿತವಾಗಿದೆ.24*7 ಕುಂಟುತ್ತಾ ಸಾಗಿರುವ ಕಾಮಗಾರಿ, ಅನೇಕ ವಾರ್ಡ್ಗಳಲ್ಲಿ ಅಭಿವೃದ್ಧಿ ಮರೀಚಿಕೆ ಹೀಗೆ ಅನೇಕ ಸಾಂಪ್ರದಾಯಿಕ ಸವಾಲುಗಳು ಸಹ ನೂತನ ಮೇಯರ್ ಅವರ ಮುಂದೆ ಬರಲಿವೆ. ಆರ್ಥಿಕ ಕೊರತೆಯಿಂದ ನಲಗುತ್ತಿರುವ ವಿಜಯಪುರ ಮಹಾನಗರ ಪಾಲಿಕೆಯ ಏತನ್ಮಧ್ಯೆ ಮಹಾನಗರ ಪಾಲಿಕೆ ವ್ಯಾಪ್ತಿಯ ಅನೇಕ ಆಸ್ತಿಗಳು ಮಾರಾಟವಾಗಿವೆ.
ಈ ಬಗ್ಗೆ ಈ ಹಿಂದೆ ನಡೆದ ಸಾಮಾನ್ಯ ಸಭೆಗಳಲ್ಲಿ ಚರ್ಚೆಯ ಪ್ರಮುಖ ವಿಷಯ ವಸ್ತು ಸಹ ಆಗಿರುತ್ತಿತ್ತು. ಕಾಲಕ್ರಮೇಣ ಜನಪ್ರತಿನಿಧಿಗಳ ಆಡಳಿತ ಸಾಧ್ಯವಾಗದೇ ವರ್ಷಗಳೇ ಉರುಳಿ ಹೋಗಿವೆ. ಹೀಗಾಗಿ ಪಾಲಿಕೆಯ ಆಸ್ತಿ ಉಳಿಸಿಕೊಳ್ಳುವುದು ಸಹ ಒಂದು ಸವಾಲಾಗಿದೆ.ಏತನ್ಮಧ್ಯೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹ ಈ ವಿಷಯವಾಗಿ ಗುಡುಗಿದ್ದಾರೆ.
ಕೆಲ ಅಧಿಕಾರಿಗಳು ಲೀಜ್ ನೆಪದಲ್ಲಿ ಪಾಲಿಕೆ ವ್ಯಾಪ್ತಿಯ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ನೀಡುವ ಹುನ್ನಾರದ ಬಗ್ಗೆ ತಿಳಿದು ಬಂದಿದೆ ಎಂದು ಯತ್ನಾಳ ಗಂಭೀರವಾಗಿ ಆರೋಪಿಸಿದ್ದಾರೆ.
ಒಂದು ವೇಳೆ ಖಾಸಗಿ ವ್ಯಕ್ತಿಗಳಿಗೆ ಅಥವಾ ನಕಲಿ ಸಂಸ್ಥೆಗಳಿಗೆ ಲೀಜ್ ನೆಪದಲ್ಲಿ ಮಾರಾಟ ಮಾಡಲು ಮುಂದಾದರೆ, ತಪ್ಪಿತಸ್ಥ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಹೋರಾಟ ಮಾಡುವುದಲ್ಲದೆ, ಅವರ ಮೇಲೆ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿ ಸೇವೆಯಿಂದ ವಜಾ ಮಾಡುವವರೆಗೂ ಕಾನೂನು ಹೋರಾಟಕ್ಕೂ ಯಾವುದೇ ಮುಲಾಜಿಲ್ಲದೆ ನಾವು ಮುಂದಾಗಬೇಕಾಗುತ್ತದೆ ಎಂದು ಯತ್ನಾಳ ಈಗಾಗಲೇ ತಮ್ಮ ಹೇಳಿಕೆ ನೀಡಿದ್ದಾರೆ.
ಕಾರಣ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಪಾಲಿಕೆಯ ಆಸ್ತಿಗಳನ್ನು ಲೀಜ್ ಆಧಾರದ ಮೇಲೆ ಮಾರಾಟ ಮಾಡಬೇಕಾದರೆ ಎಚ್ಚರಿಕೆಯಿಂದ ಇರಬೇಕು ಹಾಗೂ ಶಾಸಕರು ಒಳಗೊಂಡಂತೆ, ಪಾಲಿಕೆಯ ಸರ್ವ ಸದಸ್ಯರ ಗಮನಕ್ಕೆ ತರಬೇಕು ಎಂದು ಸಹ ಹೇಳಿದ್ದಾರೆ. ಆ ಮೂಲಕ ಪಾಲಿಕೆ ಆಸ್ತಿ ಸಂರಕ್ಷಣೆಯ ನೂತನ ಮೇಯರ್ಗೆ ದೊಡ್ಡ ಸವಾಲಾಗಿ ಎದುರಾಗುವುದರಲ್ಲಿ ಎರಡು ಮಾತಿಲ್ಲ.