ವಿಜಯಪುರ : ಕಳೆದ 9 ವರ್ಷಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ವಿಜಯಪುರ ಜಿಲ್ಲೆಯ ಕುಡಿಯುವ ನೀರಿಗೂ ಆದ್ಯತೆ ನೀಡಿದ್ದು, 11050.50 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ರೈಲ್ವೇ ಜಾಲ ವಿಸ್ತರಣೆ, ರಸ್ತೆ ಸಂಪರ್ಕ ಸೇರಿದಂತೆ ಅನೇಕ ಭೌತಿಕ ಕಾಮಗಾರಿಗೆ ಆದ್ಯತೆ ನೀಡಿದಂತೆ ಪ್ರತಿಯೊಬ್ಬರಿಗೂ ಶುದ್ಧವಾದ ಕುಡಿಯುವ ನೀರು ಒದಗಿಸುವ ಸಂಕಲ್ಪವನ್ನು ಸಾಕಾರಗೊಳಿಸಿದ್ದು, ಕೇಂದ್ರ ಪುರಸ್ಕೃತ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಅಮೃತ ಯೋಜನೆಯಡಿಯಲ್ಲಿ ವಿಜಯಪುರ ನಗರದ ನೀರು ಪೈರೈಕೆಗಾಗಿ 195.35 ಕೋಟಿ ರೂ. ಅನುದಾನ, ಅದೇ ತೆರನಾಗಿ ವಿಜಯಪುರ ನಗರದ ಆರು ಉದ್ಯಾನವನ ನಿರ್ಮಾಣಕ್ಕಾಗಿಯೂ ಈ ಯೋಜನೆಯಡಿಯಲ್ಲಿ 4ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ವಿವರಿಸಿದರು. ಗ್ರಾಮೀಣ ಕುಡಿಯುವ ನೀರಿಗಾಗಿ ಜಲ ಜೀವನ್ ಮಿಷನ್ ಅಡಿಯಲ್ಲಿ ಭೌತಿಕವಾಗಿ 1016 ನಳಗಳ ಜೋಡಣೆಗಾಗಿ 406.25 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು. ಬಹುಹಳ್ಳಿ ಯೋಜನೆಯಡಿಯಲ್ಲಿ ಇಂಡಿ ತಾಲೂಕಿನ 76 ಗ್ರಾಮಗಳಲ್ಲಿ 110 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.
ಜಲಕ್ಕೆ ಕೇಂದ್ರ ಸರ್ಕಾರ ಪ್ರಥಮಾದ್ಯತೆ ನೀಡುತ್ತಲೇ ಬಂದಿದ್ದು, ಈ ಹಿಂದಿನ ಯುಪಿಎ ಸರ್ಕಾರ ಜಲಶಕ್ತಿ ಮಂತ್ರಾಯಕ್ಕೆ 15265 ಕೋಟಿ ರೂ. ಹಣ ಖರ್ಚು ಮಾಡಿದ್ದರೆ, ಪ್ರಸ್ತುತ ಎನ್‌ಡಿಎ ಸರ್ಕಾರ ಕೇವಲ ಒಂದೇ ವರ್ಷ ಅವಧಿಯಲ್ಲಿ 97278 ಕೋಟಿ ರೂ. ಅಂದರೆ ಶೇ.537.26 ಕಿಂತ ಹೆಚ್ಚು ಅನುದಾನವನ್ನು ಖರ್ಚು ಮಾಡಿದೆ ಎಂದರು.
ಗಂಗಾ ನದಿ ಸ್ವಚ್ಛತೆಗಾಗಿ ಯುಪಿಎ ಸರ್ಕಾರ 938.57 ಕೋಟಿ ರೂ. ಖರ್ಚಾದರೆ, ಎನ್‌ಡಿಎ ಸರ್ಕಾರ ಕಳೆದ 2022ರ ಡಿಸೆಂಬರ್ ತಿಂಗಳವರೆಗೆ 32912.40 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು.
ಫೌಂಡೇಷನ್ ಹಾಕಿದ್ದು ನಾವು – ಅನುದಾನ ಕೊಟ್ಟಿದ್ದೂ ನಾವು…
ವಿಮಾನ ನಿಲ್ದಾಣ ಕಾಮಗಾರಿ ಫೌಂಡೇಷನ್ ಹಾಕಿದ್ದು ನಮ್ಮ ಸರ್ಕಾರ, ಅದಕ್ಕೆ ಅನುದಾನ ಕೊಟ್ಟಿದ್ದು ನಮ್ಮ ಬಿಜೆಪಿ ಸರ್ಕಾರ, ಹಾಗಿದ್ದರೆ ಈ ಹಿಂದೆ ಸಿದ್ಧರಾಮಯ್ಯ ಅವರ ಸರ್ಕಾರ ಅವಧಿಯಲ್ಲಿ ಏಕೆ ವಿಮಾನ ನಿಲ್ದಾಣ ಪೂರ್ಣ ಮಾಡಲಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಅಸಮಾಧಾನದಿಂದ ಪ್ರಶ್ನಿಸಿದರು.
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸಂಪೂರ್ಣ ಪ್ರಗತಿಯತ್ತ ಸಾಗಿರುವುದು ಸಂತೋಷದ ಸಂಗತಿ, ಈ ವಿಮಾನ ನಿಲ್ದಾಣಕ್ಕೆ ನಾನು ಅವಿರತವಾಗಿ ಶ್ರಮಿಸಿದ್ದೇನೆ, ಶೀಘ್ರದಲ್ಲಿಯೇ ವಿಮಾನ ಹಾರಾಟ ಮಾಡುವ ನಿಟ್ಟಿನಲ್ಲಿ ನಾನು ಸಹ ವೈಯುಕ್ತಿಕವಾಗಿ ಸರ್ಕಾರದ ಮೇಲೆ ಒತ್ತಡ ಹೇರುವೆ ಎಂದು ಹೇಳಿದ ಸಂಸದ ರಮೇಶ ಜಿಗಜಿಣಗಿ, ಉದ್ದೇಶಿತ ವಿಮಾನ ನಿಲ್ದಾಣಕ್ಕೆ 347.92 ಕೋಟಿ ರೂ. ಹಣ ಮಂಜೂರಾಗಿದ್ದು ಅದರಲ್ಲಿ 253 ಕೋಟಿ ರೂ. ಖರ್ಚಾಗಿದೆ, ಈಗಾಗಲೇ ಟ್ಯಾಕ್ಸಿ ವೇ, ರನ್-ವೇ, ಐಸೋಲೇಷನ್ ಬೇ, ಒಳ ರಸ್ತೆ ಸಂಪರ್ಕ, ಆಂತರಿಕ ರಸ್ತೆ ಹಾಗೂ ಟರ್ಮಿನಲ್ ಕಾಮಗಾರಿ ಪ್ರಗತಿಯಲ್ಲಿದೆ, ಫೆಬ್ರವರಿ ತಿಂಗಳಲ್ಲಿ ಗಗನಯಾನ ಆರಂಭವಾಗಲಿ ಎಂಬುದು ನನ್ನ ಆಶಯ ಸಹ ಹೌದು, ಕ್ರೆಡಿಟ್‌ಗಿಂತಳೂ ಜನರಿಗೆ ಒಳ್ಳೆಯದಾದರೆ ಸಾಕು ಎಂದರು.
ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.