ಕೈಗಾರಿಕೋದ್ಯಮಿಗಳಿಗೆ ಅರಿವು ಕಾರ್ಯಕ್ರಮ‌ ನಾಳೆ

ವಿಜಯಪುರ: ಜಿಲ್ಲೆಯ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸಲು ನಗರದ ಸ್ಫೂರ್ತಿ ರೆಸಾರ್ಟ್‌ ಮತ್ತು ಕ್ಲಬ್‌ಹೌಸ್‌ನಲ್ಲಿ ಸೆ.6 ರಂದು ‘ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತು ಹಾಗೂ ಹಣಕಾಸಿನ ನೆರವು ಕುರಿತ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಸಿಯಾ ಸಂಸ್ಥೆಯ ಅಧ್ಯಕ್ಷ ಶಶಿಧರ ಶೆಟ್ಟಿ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡ್ಬಿ, ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆ ಹಾಗೂ ಕಾಸಿಯಾ ಸಂಸ್ಥೆಯ ಸಹಯೋಗದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೋದ್ಯಮಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು, ಸಿಡ್ಬಿಯಿಂದ ದೊರೆಯುವ ಹಣಕಾಸು ಯೋಜನೆಗಳು, ZED ಪ್ರಮಾಣೀಕರಣ, ಉದ್ಯಮ ಸಹಾಯ ವೇದಿಕೆ, ಡಿಜಿಟಲ್‌ ಉಪಕ್ರಮಗಳಾದ ONDC, TReDS, ಸ್ಥಳೀಯ ಬ್ಯಾಂಕುಗಳಿಂದ ದೊರೆಯುವ ಹಣಕಾಸು ಯೋಜನೆಗಳು, ಸ್ವಯಂ ಉದ್ಯೋಗ, ಹಾಗೂ ಸಿಎಫ್‌ಟಿಆರ್‌ಐ ವತಿಯಿಂದ ಆಹಾರ ಸಂಸ್ಕರಣಾ ಕುರಿತು ಮಾಹಿತಿ ಒದಗಿಸಲಾಗುವುದು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂಎಸ್‌ಎಂಇ ವಲಯದ ಉತ್ತೇಜನಕ್ಕಾಗಿ ವಿವಿಧ ಯೋಜನೆ ಹಾಗೂ ರಿಯಾಯಿತಿಗಳನ್ನು ಪ್ರಾರಂಭಿಸುತ್ತಿದೆ. ಆದರೇ ಸರಿಯಾದ ಮಾರ್ಗದರ್ಶನ ಮತ್ತು ಅರಿವಿನ ಕೊರತೆಯಿಂದಾಗಿ ಈ ಸೌಲಭ್ಯಗಳು ಸದ್ಬಳಕೆಯಾಗಿಲ್ಲ. ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಮಾಹಿತಿ ತಲುಪಿದಾಗ ಮಾತ್ರ ಸಾಧ್ಯ ಎಂದರು.

ರಾಜ್ಯಾದ್ಯಂತ ಎಂಎಸ್‌ಎಂಇ ಸಬಲೀಕರಣಕ್ಕಾಗಿ ‘ಅವಕಾಶಗಳನ್ನು ಸೃಷ್ಟಿಸುವುದು, ಅಂತರವನ್ನು ನಿವಾರಿಸುವುದು’ ಶೀರ್ಷಿಕೆಯಡಿ ಆರ್ಥಿಕ ಸಾಕ್ಷರತೆ ಹಾಗೂ ಕ್ರೆಡಿಟ್ ಲಿಂಕ್, ಮಾರುಕಟ್ಟೆಯ ಮಾನ್ಯತೆ, ಡಿಜಿಟಲ್ ಉಪಸ್ಥಿತಿಯ ಮೂಲಕ ಗ್ರಾಹಕರ ನೆಲೆಯನ್ನು ವಿಸ್ತರಿಸುವ ಮತ್ತು ನಿರ್ದಿಷ್ಟವಾಗಿ ಒ.ಎನ್.ಡಿ.ಸಿ., ಟ್ರೇಡ್ ಪ್ಲಾಟ್‌ಫಾರ್ಮ್‌ ಸದುಪಯೋಗಪಡಿಸಿಕೊಳ್ಳುವ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

ರಾಜ್ಯದಾದ್ಯಂತ ಇರುವ ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯ ಕೈಗೊಳ್ಳಲು ಹಾಗೂ ಸರ್ಕಾರದ ಯೋಜನೆ ಮತ್ತು ನೀತಿ ಕುರಿತಂತೆ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸಲು ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಉದ್ಘಾಟಿಸಲಿದ್ದಾರೆ. ಹಾಗೂ ವಿವಿಧ ವಿಷಯ ತಜ್ಞರು ಮಾಹಿತಿ ಒದಗಿಸಲಿದ್ದಾರೆ. ಜಿಲ್ಲೆಯ ಕೈಗಾರಿಕೋಧ್ಯಮಿಗಳು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಲು ಎಂದು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಅಶೋಕ ಪಿಸ್ಟಿ, ಸಿಡ್ಬಿ ಉಪಪ್ರಧಾನ ವ್ಯವಸ್ಥಾಪಕ ಬಿ.ಉಲಗಿಯನ್‌, ಎಂ.ಜಿ ರಾಜಗೋಪಾಲ್‌, ಎಸ್‌.ನಾಗರಾಜು, ಅರುಣ್‌ ಪಡಿಯಾರ್‌, ಎಚ್‌.ಕೆ ಮಲ್ಲೇಶಗೌಡ ಇದ್ದರು.

Latest Indian news

Popular Stories