ಬಿ.ಎಲ್.ಸಂತೋಷ ಅವರ ಆಡಳಿತ ಹಸ್ತಕ್ಷೇಪದಿಂದಲೇ ಲಿಂಗಾಯತ ನಾಯಕರು ಸಿಡಿದೆದ್ದಿದ್ದಾರೆ: ಸಚಿವ ತಿಮ್ಮಾಪುರ

ಬಾಗಲಕೋಟೆ: ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಅಭಿಪ್ರಾಯ ಬಹಳಷ್ಟು ಜನ ಲಿಂಗಾಯತ ನಾಯಕರಿಂದಲೇ ವ್ಯಕ್ತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.


ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನಿತ ಲಿಂಗಾಯತರನ್ನು ಕಾಂಗ್ರೆಸ್‌ಗೆ ಸೆಳೆಯಲು ಮಾಜಿ ಸಿಎಂ ಜಗದೀಶ ಶೆಟ್ಟರ ಪ್ರಯತ್ನ ಮಾಡುವ ವಿಚಾರ ನನಗೆ ಗೊತ್ತಿಲ್ಲ. ಆದರೆ ಲಿಂಗಾಯತರಿಗೆ ಅನ್ಯಾಯವಾಗುತ್ತಿದ್ದು, ಅದನ್ನು ಸರಿಪಡಿಸಿಕೊಳ್ಳಿ ಅಂತಾ ಬಿಜೆಪಿ ಪಕ್ಷಕ್ಕೆ ಸಲಹೆ ನೀಡುತ್ತಿದ್ದಾರೆ. ಹಾಗೂ ಲಿಂಗಾಯತರನ್ನು ತುಳಿಯುವ ಕೆಲಸ ನಡೆದಿರುವ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದರು.


ಇನ್ನು ಕಾಂಗ್ರೆಸ್‌ನ 45 ಶಾಸಕರು ಸಂಪರ್ಕದಲ್ಲಿರುವ ಕುರಿತು ಬಿ.ಎಲ್. ಸಂತೋಷ ನೀಡಿರುವ ಹೇಳಿಕೆಗೆ ಸಚಿವರು ತಿರುಗೇಟು ನೀಡಿ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬಿ.ಎಲ್. ಸಂತೋಷ ವರ್ತನೆ ಮತ್ತು ಆಡಳಿತ ಹಸ್ತಕ್ಷೇಪದಿಂದಲೇ ಬೇಸರವಾಗಿ ಕರ್ನಾಟಕದ ಲಿಂಗಾಯತ ನಾಯಕರು ಸಿಡಿದೆದ್ದಿದ್ದಾರೆ ಎಂದರು.


ಲಿಂಗಾಯತ ನಾಯಕರನ್ನು ಸಮಾಧಾನಪಡಿಸುವ ಕೆಲಸ ನಡೆಯದ ಹಿನ್ನೆಲೆಯಲ್ಲಿ ಬಹುತೇಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಮೊದಲು ನಿಮ್ಮ (ಬಿಜೆಪಿ) ಪಕ್ಷ ಸರಿಮಾಡಿಕೊಳ್ಳಿ ಎಲ್ಲ ಜಾತಿ, ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿ ಎಂದು ಸಚಿವರು ಕಿವಿಮಾತು ಹೇಳಿದರು.
ಸಂತೋಷ ಅವರು ತಮ್ಮ ಮೇಲಿನ ಆಕ್ರೋಶ ತಣಿಸಲು ಕಾಂಗ್ರೆಸ್‌ನ 45 ಶಾಸಕರು ಸಂಪರ್ಕದಲ್ಲಿದ್ದಾರೆ ಅಂತಾ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುವವರ ಸಂಖ್ಯೆ ಇದೆ. ಆದರೆ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗುವವರು ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಉದಯನಿಧಿ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ತಿಮ್ಮಾಪುರ, ಅದೇನಾಗಿದೆ ನನಗೆ ಗೊತ್ತಿಲ್ಲ. ತಮಿಳುನಾಡು ಗಮನದಲ್ಲಿರಿಸಿ ಮಾತನಾಡಿರಬಹುದು. ಇದರಲ್ಲಿ ಪಕ್ಷದ ನಿಲುವು ಏನಿರೋದಿಲ್ಲ ಈ ದೇಶದಲ್ಲಿ ಅವರವರ ಧರ್ಮ ಅವರವರ ಆಚರಣೆಗೆ ಬಿಟ್ಟಿದ್ದು. ನಾವು ಪಕ್ಷದ ವತಿಯಿಂದ ನೀ ಆ ಧರ್ಮ, ಈ ಧರ್ಮದಲ್ಲಿ ಅಂತ ಹೇಳೋದಲ್ಲ ಅದನ್ನು ಧರ್ಮಾಧಿಕಾರಿಗಳು, ಪೀಠಧಿಕಾರಿಗಳು ಮಾಡ್ತಾರೆ ಧರ್ಮ ಸ್ವೀಕಾರ ಮಾಡಲು ಇಲ್ಲಿ ಎಲ್ಲರೂ ಸ್ವತಂತ್ರ ಎಂದರು.

Latest Indian news

Popular Stories