ಪ್ರಸವಪೂರ್ವ ಲಿಂಗಪತ್ತೆ ಕಾನೂನು ಬಾಹಿರ: ಡಿಸಿ ಟಿ.ಭೂಬಾಲನ್

ವಿಜಯಪುರ: ಗಂಡು ಹಾಗೂ ಹೆಣ್ಣಿನ ನಡುವೆ ಸಮಾನ ಅನುಪಾತ ತರುವ ನಿಟ್ಟಿನಲ್ಲಿ ಪ್ರಸವಪೂರ್ವ ಲಿಂಗಪತ್ತೆ ನಿಷೇಧ ಕಾನೂನನ್ನು ಕಡ್ಡಾಯವಾಗಿ ಎಲ್ಲಾ ಸ್ವಾನಿಂಗ್ ಸೆಂಟರ್ಗಳು ಪಾಲಿಸತಕ್ಕದ್ದು, ಒಂದುವೇಳೆ ಕಾನೂನು ಬಾಹಿರವಾಗಿ ನಡೆದುಕೊಂಡಲ್ಲಿ ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾವುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪಿಸಿ, ಪಿಎನ್ಡಿಟಿಯು ಜಿಲ್ಲಾ ಸಲಹಾ ಸಮಿತಿ ಸಭೆ ಹಾಗೂ ಜಿಲ್ಲಾ ತಪಾಸಣ ಮತ್ತು ಮೇಲ್ವಿಚಾರಣ ಸಮಿತಿಯ ತುರ್ತುಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ಕ್ಯಾನಿಂಗ್ ಸೆಂಟರ್ಗಳು ಪಿಸಿ, ಪಿಎನ್ಡಿಟಿಯು ಕಾಯ್ದೆಗಳ ಅನುಸಾರ ಕಾರ್ಯನಿರ್ವಹಿಸಬೇಕು. ಕಾಯ್ದೆಗಳನ್ನು ಉಲ್ಲಂಘಿಸುವ ಸ್ಕ್ಯಾನಿಂಗ್ ಕೇಂದ್ರಗಳ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು. ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧ ಮತ್ತು ಶಿಕ್ಷಾರ್ಹವಾಗಿದೆ. ಮೊದಲ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ಹಾಗೂ 2ನೇ ಬಾರಿ ಕಾಯ್ದೆ ಉಲ್ಲಂಘಿಸಿದವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಲಾಗುತ್ತದೆ. ಮಹಿಳೆಯ ಗಂಡ, ಅತ್ತೆ, ಮಾವ ಹಾಗೂ ಇತರ ಸಂಬಂಧಿಕರು ಭ್ರೂಣಲಿಂಗ ಪತ್ತೆಗೆ ಪ್ರೋತ್ಸಾಹಿಸಿದರೆ ಅವರು ಸಹ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಅವರು ಹೇಳಿದರು.

ಪುರುಷರು ಮತ್ತು ಮಹಿಳೆಯರ ಅನುಪಾತದಲ್ಲಿ ವ್ಯತ್ಯಾಸವಾಗದಂತೆ ಮುನ್ನೆಚರಿಕೆಯಾಗಿ ಆರೋಗ್ಯ ಸಂಸ್ಥೆಗಳು, ಗ್ರಾಮಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಆರೋಗ್ಯ ಕಾರ್ಯ ಕರ್ತೆಯರು, ಚುನಾಯಿತ ಮಹಿಳಾ ಪ್ರತಿನಿಧಿಗಳು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದರು.

ಇದೇ ವೇಳೆ ವಿಜಯಪುರದ ಜನನಿ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಕಾರಣದಿಂದ ಕಳೆದ 2 ತಿಂಗಳಿನಿಂದ ಅದನ್ನು ಮುಚ್ಚಿಸಲಾಗಿತ್ತು, ಈ ಕಾರಣಕ್ಕೆ ಅವರಿಗೆ ನೋಟಿಸ್ ಕೂಡ ಕೊಡಲಾಗಿದೆ. ಅಲ್ಲಿಯ ವೈದ್ಯರಿಂದ ಸಮಂಜಸವಾದ ಉತ್ತರ ಬಾರದೇ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಸ್ರೀರೋಗ ಹಾಗೂ ಪ್ರಸೂತಿ ತಜ್ಞರಾದ ಡಾ.ಟಿ.ಪಿ. ನಾಯ್ಡು, ಡಾ.ಎಸ್.ಆರ್.ಬಿದರಿ, ಚಿಕ್ಕಮಕ್ಕಳ ತಜ್ಞರಾದ ಡಾ.ರವಿ ನಾಗನೂರ, ವಿಜಯಾ ಬಾಳಿ, ಎಸ್.ಎ. ಶಿವಗೊಂಡ ಉಪಸ್ಥಿತರಿದ್ದರು.

Latest Indian news

Popular Stories