ಮಾ.30ರಿಂದ 13 ನೇ ಸಾಂಸ್ಕೃತಿಕ ದಿನೋತ್ಸವ

ವಿಜಯಪುರ : ಅರ್ಥಪೂರ್ಣ ವಿಚಾರಧಾರೆಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರಸಾರ ಪಡಿಸುವ ಉದ್ದೇಶದಿಂದ ಇದೇ ದಿ.30 ರಿಂದ ಎರಡು ದಿನಗಳ ಕಾಲ 13 ನೇ ಸಾಂಸ್ಕೃತಿಕ ದಿನೋತ್ಸವ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿದೆ ಎಂದು ಆವಿಷ್ಕಾರ ಸಂಘಟನೆ ಸಂಚಾಲಕ ಎಚ್.ಟಿ. ಭರತಕುಮಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಎಐಡಿಎಸ್ಓ, ಎಐಎಂಎಸ್ಎಸ್ ಹಾಗೂ ಎಐಡಿವೈಓ ಸಂಯುಕ್ತಾಶ್ರದಯದಲ್ಲಿ ಈ ಸಮಾವೇಶ ನಡೆಯಲಿದೆ ಎಂದರು.
ಇಂದು ಮಾನವ ಸಂಬಂಧಗಳು ಆಯಷ್ಯ ಮುಗಿದ ನೂಲಿನೆಳೆಯಂತಾಗಿವೆ. ಇಂಥಹ ಕಲುಷಿತ ವಾತಾವರಣದ ಮಧ್ಯದಲ್ಲಿ ನಾನು ಮಾತ್ರ ನನ್ನ ಪಾಡಿಗೆ, ನೆಮ್ಮದಿ & ಸಂತೋಷದಿಂದ ಬದುಕಬಲ್ಲೆ ಎಂದು ಭಾವಿಸಿದರೆ ಅದು ಸಾಧ್ಯವಾಗದು. ಇವೆಲ್ಲ ಒಂದು ಮನೆಯ ಅಥವಾ ಒಬ್ಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಗಳಂತೆ ಕಂಡರೂ ಇದರ ಮೂಲ ಅಡಗಿರುವುದು ಮಾತ್ರ ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ. ಅಂತಹ ವ್ಯವಸ್ಥೆಯನ್ನು ಬದಲಾಯಿಸುವ ಅವಶ್ಯಕತೆ ಇದೆ ಎಂದರು.
ದಿ.30 ರಂದು ಸಂಜೆ 5.30 ಕ್ಕೆ ಖ್ಯಾತ ಹೋರಾಟಗಾರ್ತಿ ರೂಪಾ ಹಾಸನ ಸಾಂಸ್ಕೃತಿಕ ಜನೋತ್ಸವಕ್ಕೆ ಚಾಲನೆ ನೀಡಲಿದ್ದು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನೂತನ ಅಧ್ಯಕ್ಷ ಡಾ. ಚೆನ್ನಪ್ಪ ಕಟ್ಟಿ, ಎಐಡಿಎಸ್ಓನ ಅಖಿಲ ಭಾರತ ಉಪಾಧ್ಯಕ್ಷ ಡಾ. ಎನ್. ಪ್ರಮೋದ ಮುಖ್ಯ ಅತಿಥಿಗಳಾಗಿ ಆಗಮಿಸುವರು. ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯಿಂದ ಸಮೂಹ ಗಾಯನ. ಗೀತಾಂಜಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ, ಕಲಾವಿದರಾದ ಸಿದ್ದಣ್ಣ ಬಿಜ್ಜರಗಿ ಅವರಿಂದ ತತ್ವ ಪದ, ಲಕ್ಷ್ಮೀ ತೇರದಾಳಮಠ ಅವರ ನಾಟ್ಯಕಲಾ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ರೂಪಕ, ಕಾವ್ಯ-ಕುಂಚ-ನೃತ್ಯ ಎಂಬ ವಿಶಿಷ್ಠ ಕಾರ್ಯಕ್ರಮ ನಡೆಯಲಿದೆ. ನಂತರ ಹೆನ್ರಿಕ್ ಇಬ್ಸೆನ್ ಅವರ ನಾಟಕವನ್ನು ಆದರಿಸಿ ಎಸ್. ಸುರೇಂದ್ರನಾಥ ಅವರು ರಚಿಸಿ, ನಿರ್ದೇಶಿಸಿರುವ ಜನ ಶತ್ರು ಎಂಬ ನಾಟಕವನ್ನು ಚಾಮರಾಜನಗರದ ಶಾಂತಲಾ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ ಎಂದರು.

ದಿ.31 ರಂದು ಬೆಳಿಗ್ಗೆ 11ಕ್ಕೆ `ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ’ ಎಂಬ ವಿಷಯದ ಕುರಿತು ಚರ್ಚಾ ಕಾರ್ಯಕ್ರಮ ನಡೆಯಲಿದ್ದು, ಲೇಖಕಿ ರೂಪ ಹಾಸನ ನೇತೃತ್ವ ವಹಿಸಲಿದ್ದಾರೆ, ಅದೇ ದಿನ ಸಂಜೆ 5.30 ಕ್ಕೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಥೆಯಾಧಾರಿತ ಸಿನೆಮಾ ‘ಡೇರ್ ಡೆವಿಲ್ ಮುಸ್ತಫಾ’ದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಸಿನೆಮಾ ಪ್ರದರ್ಶನದ ನಂತರ ನಿರ್ದೇಶಕರಾದ ಶಶಾಂಕ ಸೋಗಲ್ ಅವರು ಸಿನೆಮಾ ಕುರಿತು ಸಂವಾದ ನಡೆಸಲಿದ್ದಾರೆ ಎಂದು ಭರತಕುಮಾರ ವಿವರಿಸಿದರು. ರಂಗಮಂದಿರದ ಆವರಣದಲ್ಲಿ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ ಸಹ ನಡೆಯಲಿದೆ ಎಂದರು.

ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ, ಶಿವಬಾಳಮ್ಮ ಕೊಂಡಗೂಳಿ, ಕಾವೇರಿ ರಜಪೂತ, ಸಿದ್ರಾಮ ಹಿರೇಮಠ, ಶ್ರೀಕಾಂತ ಕೆ., ಸುರೇಖಾ ಕಡಪಟ್ಟಿ, ಶಿವರಂಜನಿ ಉಪಸ್ಥಿತರಿದ್ದರು.

Latest Indian news

Popular Stories