ರಾಹುಲ್ ಗಾಂಧಿ ಕಾರ್ಯಕ್ರಮ; ಸ್ಥಳ-ತಯಾರಿ ವೀಕ್ಷಿಸಿದ ಸಚಿವ ಎಂ.ಬಿ.ಪಾಟೀಲ

ವಿಜಯಪುರ: ಸಂಸದ ಮತ್ತು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಏ. 26 ರಂದು ವಿಜಯಪುರ ನಗರಕ್ಕೆ ಆಗಮಿಸಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು, ಕಾರ್ಯಕ್ರಮ ನಡೆಯಲಿರುವ ಬಿ.ಎಲ್.ಡಿ.ಇ. ಹೊಸ ಕ್ಯಾಂಪಸ್‌ಗೆ ತೆರಳಿ ಮಂಗಳವಾರ ಸಂಜೆ ತಯಾರಿ ಪರಿಶೀಲನೆ ನಡೆಸಿದರು.

ಏ. 26 ರಂದು ಬೆಳಿಗ್ಗೆ 11 ಗಂಟೆಗೆ ರಾಹುಲ್ ಗಾಂಧಿ ವಿಜಯಪುರಕ್ಕೆ ಆಗಮಿಸಲಿದ್ದಾರೆ. ಅವರೊಂದಿಗೆ ಸಿಎಂ ಎಸ್. ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿರಲಿದ್ದಾರೆ.

ತಯಾರಿ ವೀಕ್ಷಣೆ ಸಂದರ್ಭ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಎಸ್ಪಿ ರಿಷಿಕೇಷ ಸೋನಾವಣೆ, ನಗರ ಡಿವೈಎಸ್ಪಿ ಬಸವರಾಜ ಯಲಿಗಾರ, ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ರಾಜು ಮುಜುಮದಾರ ಮುಂತಾದವರು ಉಪಸ್ಥಿತರಿದ್ದರು.

ನ ಖಾವೂಂಗಾ ನಾ ಖಾನೇ ದೂಂಗಾ ಎಂದವರು ಭ್ರಷ್ಟಾಚಾರ ಮಾಡಿದರು: ಸಚಿವ ಎಂ.ಬಿ.ಪಾಟೀಲ

ವಿಜಯಪುರ: ನ ಖಾವೂಂಗಾ ನಾ ಖಾನೇ ದೂಂಗಾ ಎಂದವರು ಭ್ರಷ್ಟಾಚಾರ ಮಾಡಿದರು. ಚುನಾವಣೆ ಬಾಂಡ್ ಬಿಜೆಪಿ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಬೆಲೆ ಏರಿಕೆ ಮುಗಿಲು ಮುಟ್ಟಿದೆ. ಗ್ಯಾಸ್ ದರ ಹೆಚ್ಚಳ ಆಗಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿದೆ, ರೂಪಾಯಿ ಮೌಲ್ಯ ಕುಸಿದಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಆಗಲೇ ಇಲ್ಲ. ನೋಟ್ ಬ್ಯಾನ್ ಮೂಲಕ ಜನರಿಗೆ ತೊಂದರೆ ನೀಡಿದರು. ಕಪ್ಪು ಹಣ ಹೊರಗೆ ಬರಲೇ ಇಲ್ಲ. ರೈತರ ಆದಾಯ ದ್ವಿಗುಣ ಆಗಲೇ ಇಲ್ಲ. ಅಚ್ಚೇ ದಿನ್ ಬರಲೇ ಇಲ್ಲ.

ಸಿಬಿಐ, ಐಟಿ, ಈಡಿ ಮೂಲಕ ಹೆದರಿಸಿ 7600 ಕೋಟಿ ದೇಣಿಗೆ ಸಂಗ್ರಹಿಸಿದೆ. ಆ ಮೂಲಕ ಮೋದಿ ಅವರ ಮುಖವಾಡ ಕಳಚಿದೆ. ಹೀಗಾಗಿ ಜನ ಕಾಂಗ್ರೆಸ್ ಬಗ್ಗೆ ಒಲವು ತೋರುತ್ತಿದ್ದಾರೆ ಎಂದರು.
ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದರೂ ಈವರೆಗೂ ಗ್ಯಾಜೆಟ್ ನೋಟಿಫಿಕೇಶನ್ ಆಗಿಲ್ಲ. ಈ ಬಗ್ಗೆ ಸಂಸದ ರಮೇಶ ಜಿಗಜಿಣಗಿ ಸಂಸತ್ ನಲ್ಲಿ ಧ್ವನಿ ಎತ್ತಿಲ್ಲ. ಬರ ನಿರ್ವಹಣೆ ಬಗ್ಗೆ ಮಾತನಾಡಿಲ್ಲ, ಪ್ರವಾಸೋದ್ಯಮ ಉತ್ತೇಜನಕ್ಕೆ ಶ್ರಮಿಸಿಲ್ಲ, ವಂದೇ ಭಾರತ ರೈಲು ಸೇವೆ ಜಿಲ್ಲೆಗೆ ಒದಗಿಸಿಲ್ಲ, ತೋಟಗಾರಿಕೆ ಬೆಳೆಗೆ ಹೆಸರಾದ ಜಿಲ್ಲೆಯ ರೈತರ ಏಳಿಗೆಗೆ ಯಾವುದೇ ಯೋಜನೆ ತಂದಿಲ್ಲ, ಒಂದೇ ಒಂದು ಪ್ರಶ್ನೆ ಸಂಸತ್ ನಲ್ಲಿ ಕೇಳಿಲ್ಲ. ಹೀಗಾಗಿ ಜನ ರಾಜು ಆಲಗೂರ ಪರ ಒಲವು ಹೊಂದಿದ್ದಾರೆ ಎಂದರು.

26ರಂದು ಜಿಲ್ಲೆಗೆ ರಾಹುಲ್ ಗಾಂಧಿ:
ಲೋಕಸಭೆ ಚುನಾವಣೆ ಹಿನ್ನೆಲೆ ಏ. 26 ರಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಜಿಲ್ಲೆಗೆ ಆಗಮಿಸಿ ಪ್ರಚಾರ ನಡೆಸಲಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದರು.

ಅಂದು ಬೆಳಗ್ಗೆ 11 ಕ್ಕೆ ಬಿಎಲ್ ಡಿಇ ಸಂಸ್ಥೆಯ ಬೃಹತ್ ಮೈದಾನದಲ್ಲಿ ಸಭೆ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹಿತ ಅನೇಕ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಕಾಂಗ್ರೆಸ್ ಈಗಾಗಲೇ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಾಜ್ಯ ವಿಧಾನ ಸಭೆ ಚುನಾವಣೆ ಸಂದರ್ಭ ನೀಡಿದ ಐದು ಗ್ಯಾರಂಟಿ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಈ ಹಿಂದೆ 2013-18 ರ ಅವಧಿಯಲ್ಲೂ ನೀಡಿದ ಭರವಸೆಗಳನ್ನು ಈಡೇರಿಸಿದ್ದಲ್ಲದೇ ಹೆಚ್ಚುವರಿ ಭರವಸೆ ಕೂಡ ಈಡೇರಿಸಲಾಗಿದೆ. ಇದೀಗ ಲೋಕಸಭೆ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು. ಮತ್ತು ಈ ವಿಷಯದಲ್ಲಿ ಜನರಿಗೂ ಭರವಸೆ ಇದೆ ಎಂದರು.

ರೈತರ ಸಾಲಮನ್ನಾ, ರೈತರಿಗೆ ಬೆಳೆಗೆ ಯೋಗ್ಯ ದರ ನಿಗದಿಗೊಳಿಸುವ ನಿಟ್ಟಿನಲ್ಲಿ ಎಂಎಸ್ ಪಿ ಜಾರಿ, ಮಹಿಳೆಯರಿಗೆ ಮತ್ತು ಯುವಕರಿಗೆ ಒಂದು ಲಕ್ಷ ರೂಪಾಯಿ, ಜಾತಿ ಗಣತಿ, ಪ್ರತಿ ವರ್ಷ 30 ಲಕ್ಷ ಉದ್ಯೋಗ ಸೃಷ್ಠಿ, ನರೇಗಾ ಕೂಲಿ ದರ ಹೆಚ್ಚಳ ಹೀಗೆ ಅನೇಕ ಭರವಸೆ ನೀಡಲಾಗಿದ್ದು, ಅಧಿಕಾರಕ್ಕೆ ಬರುತ್ತಿದ್ದಂತೆ ಈ ಎಲ್ಲ ಭರವಸೆ ಈಡೇರಿಸಲಾಗುವುದು ಎಂದರು.

Latest Indian news

Popular Stories