ವಿಜಯಪುರ : ಸಚಿವ ಸ್ಥಾನದ ಆಕಾಂಕ್ಷಿಗಳು ಅಸಮಾಧಾನ ಹೊರಹಾಕುತ್ತಿರುವ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಎರಡೂವರೆ ವರ್ಷದ ಬಳಿಕ ಟೀಂ ಪೂರ್ತಿ ಬದಲಾಗಲಿದೆ ಎನ್ನುವ ಮೂಲಕ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ ಕುಲಕರ್ಣಿ ಹೊಸ ಬಾಂಬ್ ಸಿಡಿಸಿದ್ದಾರೆ. ಎರಡೂವರೆ ವರ್ಷಗಳ ನಂತರ ಎಲ್ಲವೂ ಬದಲು ಎನ್ನುವ ವಿಚಾರ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷ ಆದಮೇಲೆ ಸಚಿವರು ಬದಲಾವಣೆ ಆಗೋಣ, ಹೊಸಬರಿಗೆ ಅವಕಾಶ ಕೊಡೋಣ ಎಂದು ಸಚಿವ ಮುನಿಯಪ್ಪ ಅವರ ಹೇಳಿಕೆ ಎಲ್ಲ ಶಾಸಕರಿಗೆ ಸಂತೋಷ ತರಿಸಿದೆ ಎಂದರು.
ನಿಗಮ ಮಂಡಳಿಗಳಿಗೆ 30ಶಾಸಕರಂತೆ ಎರಡು ಬಾರಿ ಆದರೆ ಹಾಗೂ ಅದೇ ತೆರನಾಗಿ ಎರಡು ಬಾರಿ ಸಚಿವರು ಬದಲಾವಣೆ ಆದರೆ ನಮ್ಮ ಎಲ್ಲ ಶಾಸಕರಿಗೂ ಅಧಿಕಾರ ದೊರಕಲಿದೆ, ಟೋಟಲ್ ಟೀಂ ಬದಲಾವಣೆಯಾಗಬೇಕು, ಇನ್ನೂ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಷಯ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಬಿಜೆಪಿ ಮಾಜಿ ಶಾಸಕರು ಬರುವುದು ನಿಶ್ಚಿತ
ಬಿಜೆಪಿ ವಲಯದಲ್ಲಿ ಅನೇಕ ಶಾಸಕರಿಗೆ ಅಸಮಾಧಾನ ಇರುವುದು ನಿಜ, ಹಾಲಿ ಶಾಸಕರ ಜೊತೆಗೆ ಕೆಲ ಮಾಜಿ ಶಾಸಕರು ಅಸಮಾಧಾನಗೊಂಡಿದ್ದಾರೆ, ಕಳೆದ ಬಾರಿ ಸೋತ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಸಾಕಷ್ಟು ಮಂದಿ ಬಿಜೆಪಿಯಿಂದ ಬರುವ ಸಂಭವ ಇದೆ ಎನ್ನುವ ಕ್ಷೀಪ್ರ ರಾಜಕೀಯ ಕ್ರಾಂತಿಯ ಸಂಭವವನ್ನು ಕೂಡಾ ಕುಲಕರ್ಣಿ ಹೇಳಿದರು.
13 ರಿಂದ 14 ಮಾಜಿ ಶಾಸಕರು ಬರುವ ನಿರೀಕ್ಷೆ ಇದೆ, ಆದರೆ ಹಾಲಿ ಶಾಸಕರ ಬಗ್ಗೆ ನನಗೆ ಯಾವ ಮಾಹಿತಿ ಇಲ್ಲ ಎಂದರು.
ಎಲ್ಲರೂ ಸೂಪರ್
ಡಿ.ಕೆ. ಶಿವಕುಮಾರ ಸೂಪರ್ ಸಿಎಂ ಎನ್ನುವ ವಿಚಾರವಗಿಯೂ ಪ್ರತಿಕ್ರಿಯೆ ನೀಡಿದ ಕುಲಕರ್ಣಿ, ಎಲ್ಲಾ ಇಲಾಖೆಯ ಮಂತ್ರಿಗಳು ಸಮರ್ಥರಿದ್ದಾರೆ. ನಮ್ಮ ಪಕ್ಷದಲ್ಲಿ ಯಾವ ಇಲಾಖೆಯಲ್ಲೂ ಅಸಮರ್ಥರಿಲ್ಲ, ಎಲ್ಲಾ ಮಂತ್ರಿಗಳು ಸಮರ್ಥರಿದ್ದಾರೆ, ಅನುಭವಿಗಳಿದ್ದಾರೆ, ಹೀಗಾಗಿ ಅವರು ಸೂಪರ್ ಇವರು ಸೂಪರ್ ಎನ್ನುವ ಮಾತಿಲ್ಲ ಅವರಿಗೆ ಆ ಕೆಪ್ಯಾಸಿಟಿ ಇದೆ, ಅನುಭವ ಇದೆ. ಅವರು ಸೂಪರ್ ಇವರು ಸೂಪರ್ ಎನ್ನುವ ಮಾತಿಲ್ಲ, ಎಲ್ಲರೂ ಸೂಪರ್ ಎಂದರು.