ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲಲ್ಲ: ಪರಮೇಶ್ವರ್

ತುರುವೇಕೆರೆ : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅದ್ವಿತೀಯ ಸಾಧನೆ ಮಾಡಲಿದ್ದು, ಅಚ್ಚರಿಯ ಫಲಿತಾಂಶದೊಂದಿಗೆ ದೆಹಲಿಯ ಗದ್ದುಗೆಯನ್ನು ಏರಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಡೆದಿರುವ ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ಲಭಿಸಲಿದೆ ಎಂದು ಸರ್ವೇಗಳಲ್ಲಿ ಹೇಳಲಾಗಿದೆ.

ಕಾಂಗ್ರೆಸ್ ನೀಡಿರುವ ಹಲವಾರು ಗ್ಯಾರಂಟಿಗಳು ಮತದಾರರ ಮನಸ್ಸನ್ನು ಗೆದ್ದಿದೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿಗಳಿಂದ ಬಡವರಿಗೆ ಅನುಕೂಲವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ದೇಶದ ಬಡ ಜನರ ಭವಿಷ್ಯವನ್ನು ಉಜ್ವಲಗೊಳಿಸುವ ದೃಷ್ಠಿಯಿಂದ ಹಲವಾರು ಭರವಸೆಗಳನ್ನು ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ನ ಅಲೆ ಇರುವುದರಿಂದ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್‌ಗೆ ಲಭಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರದ್ದು ಬರೀ ಸುಳ್ಳಿನ ಕಂತೆ. ಇವರ ಆಡಳಿತದಲ್ಲಿ ಬಡವರು ಬದುಕುವುದು ಕಷ್ಟವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗುವುದಂತೂ ಗ್ಯಾರಂಟಿ. ರಾಹುಲ್ ಗಾಂಧಿಯವರು ಪ್ರಧಾನಿಯಾಗಿ ದೇಶದ ಬಡ ಜನರ ನೋವಿಗೆ ದನಿಯಾಗಲಿದ್ದಾರೆ. ಚುನಾವಣೆ ನಂತರ ಮುಖ್ಯಮಂತ್ರಿಗಳ ಬದಲಾವಣೆ ಆಗುತ್ತದೋ, ಬಿಡುತ್ತದೋ ಎಂಬುದು ನಮ್ಮ ಪಕ್ಷಕ್ಕೆ ಬಿಟ್ಟ ವಿಚಾರ. ರಾಜ್ಯದಲ್ಲಿ ಹೆಚ್ಚು ಸ್ಥಾನ ಪಡೆಯುವುದು ಎಷ್ಟು ಖಚಿತವೋ ಹಾಗೆಯೇ ದೇಶದಲ್ಲೂ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯುವುದೂ ಸಹ ಖಚಿತ ಎಂದು ಹೇಳಿದರು.

Latest Indian news

Popular Stories