ವಿಚ್ಛೇದನಕ್ಕೆ ಎಲ್ಲ ಆರೋಪ ಸಾಬೀತಾಗಬೇಕಿಲ್ಲ: ಹೈಕೋರ್ಟ್‌ನಿಂದ ಮಹತ್ವ ತೀರ್ಪು

ಬೆಂಗಳೂರು(ಮೇ.06): ಎರಡು ಆರೋಪ ಮುಂದಿಟ್ಟುಕೊಂಡು ವಿಚ್ಛೇದನ ಕೋರಿದ ಸಂದರ್ಭದಲ್ಲಿ ಒಂದು ಆರೋಪ ಸಾಬೀತಾಗಿ ಮತ್ತೊಂದು ದೃಢಪಡದಿದ್ದರೂ ವಿಚ್ಛೇದನ ಮಂಜೂರು ಮಾಡಲು ಕಾನೂನಿನ ತೊಡಕು ಇರುವುದಿಲ್ಲ ಎಂದು ಹೈಕೋರ್ಟ್‌ ತೀರ್ಪು ನೀಡಿದೆ. ಪ್ರಕರಣವೊಂದರಲ್ಲಿ ಪತಿ ತನ್ನ ಚಾರಿತ್ರ್ಯ ಶಂಕಿಸಿ ಮಾನಸಿಕ ಕ್ರೌರ್ಯ ಎಸಗಿದ್ದಾರೆ ಮತ್ತು ತನ್ನನ್ನು ಪರಿತ್ಯಜಿಸಿದ್ದಾರೆ ಎಂಬ ಎರಡು ಆರೋಪಗಳನ್ನು ಮುಂದಿಟ್ಟು ಪತ್ನಿ ವಿಚ್ಛೇದನ ಕೋರಿದ್ದರು.

ಆದರೆ, ಪತಿಯು ಪತ್ನಿಯ ಚಾರಿತ್ರ್ಯ ಶಂಕಿಸಿರುವುದು ಸಾಬೀತಾದರೂ ಪರಿತ್ಯಜಿಸಿರುವ ಆರೋಪ ದೃಢಪಟ್ಟಿರಲಿಲ್ಲ.

ಹೀಗಿರುವಾಗ ಮಾನಸಿಕ ಕ್ರೌರ್ಯ ಎಸಗಿರುವುದನ್ನೇ ಪರಿಗಣಿಸಿದ ಹೈಕೋರ್ಟ್‌, ದಂಪತಿಯ ವಿವಾಹ ರದ್ದುಪಡಿಸಿ ವಿಚ್ಛೇದನ ನೀಡಿದೆ. ಪತಿ ಧ್ರುವ ಜೊತೆಗಿನ ವಿವಾಹವನ್ನು ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡುವಂತೆ ಕೋರಿ ತುಮಕೂರಿನ ನವ್ಯ ಎಂಬುವರು (ಇಬ್ಬರ ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅನು ಶಿವರಾಮನ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಪ್ರಕರಣದಲ್ಲಿ ಪತಿಯ ಮಾನಸಿಕ ಕ್ರೌರ್ಯ ಮತ್ತು ಪರಿತ್ಯಾಗದ ಕಾರಣವನ್ನು ಪರಿಗಣಿಸಿ ವಿಚ್ಛೇದನ ನೀಡಲು ಪತ್ನಿ ಕೋರಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದಾಗ ಪತ್ನಿ ತನ್ನ ಸಹೋದ್ಯೋಗಿಯೊಬ್ಬನ ಜೊತೆ ಸಂಬಂಧ ಹೊಂದಿದ್ದರು. ಆತನನ್ನು ಮದುವೆಯಾಗಲೆಂದೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಧ್ರುವ ಆಧಾರರಹಿತ ಆರೋಪ ಮಾಡಿರುವುದು ಸಾಬೀತಾಗಿದೆ. ಇದು ಪತ್ನಿಯ ಚಾರಿತ್ರ್ಯವನ್ನು ಹಾಳು ಮಾಡುವುದು ಬಿಟ್ಟು ಮತ್ತೇನು ಅಲ್ಲ ಮತ್ತು ಪತ್ನಿ ಮೇಲೆ ಎಸಗಿದ ಮಾನಸಿಕ ಕ್ರೌರ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ.

Latest Indian news

Popular Stories