ಬೀದರ್ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದ್ದು, ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು. ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಜಿಲ್ಲೆಯ 6 ಹಾಗೂ ಕಲಬುರಗಿ ಜಿಲ್ಲೆಯ ಆಳಂದ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.
ಇದುವರೆಗೆ ಒಟ್ಟು 18.45 ಲಕ್ಷ ಅರ್ಹ ಮತದಾರರು ನೋಂದಣಿ ಮಾಡಿಸಿಕೊಂಡಿದ್ದು, ಮತದಾನಕ್ಕೆ 2024 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಚುನಾವಣೆಗೆ ಏಪ್ರಿಲ್ 12ರಂದು ಅಧಿಸೂಚನೆ ಹೊರಡಿಸಲಾಗುವುದು. ಅದೇ ದಿನದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಏ. 19 ಕೊನೆಯ ದಿನ. ನಾಮಪತ್ರಗಳ ಪರಿಶೀಲನೆ ಏ. 20, ನಾಮಪತ್ರ ಹಿಂಪಡೆಯಲು ಏ. 22 ಕೊನೆಯ ದಿನವಾಗಿದೆ. ಮೇ 7ರಂದು ಮತದಾನ, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಶನಿವಾರದಿಂದಲೇ ಕ್ಷೇತ್ರ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ವಿವರಿಸಿದರು.
ಚುನಾವಣೆಯಲ್ಲಿ ಭಾವಚಿತ್ರವಿರುವ ಮತದಾರರ ಪಟ್ಟಿ ಉಪಯೋಗಿಸಲಾಗುವುದು. ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರಿಗೆ ವೀಲ್ ಚೇರ್, ಹಿರಿಯ ನಾಗರಿಕರಿಗೆ ಮನೆಯಿಂದ ಮತಗಟ್ಟೆಗೆ ಕರೆತರಲು ಸಾರಿಗೆ ವ್ಯವಸ್ಥೆ, ಕುಡಿಯುವ ನೀರು, ನೆರಳು, ಶೌಚಾಲಯ ವ್ಯವಸ್ಥೆ ಮಾಡಲಾಗುವುದು ಎಂದರು.
‘ಚುನಾವಣಾ ಸಭೆ, ರ್‍ಯಾಲಿ, ವಾಹನ, ಚುನಾವಣಾ ಕಚೇರಿ, ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿ ಅನುಮತಿ ಪಡೆಯಲು ಸುವಿಧಾ; ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅದರ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಹಾಜರಿದ್ದರು.
ಅಂಕಿ ಅಂಶ
ಏ. 12ರಿಂದ ನಾಮಪತ್ರ ಸಲ್ಲಿಕೆ ಆರಂಭ.
ಏ. 19 ನಾಮಪತ್ರ ಸಲ್ಲಿಕೆಗೆ ಕೊನೆ ದಿನ
ಏ.20 ನಾಮಪತ್ರಗಳ ಪರಿಶೀಲನೆ
ಏ. 22 ನಾಮಪತ್ರ ಹಿಂಪಡೆಯಲು ಕೊನೆ ದಿನ
ಮೇ 7ರಂದು ಮತದಾನ
ಜೂನ್ 4ರಂದು ಮತ ಎಣಿಕೆ