ಬೀದರ್ : ‘ನೀರಿನ ಸಮಸ್ಯೆ ಹೆಚ್ಚಿಸಿದ ಚುನಾವಣೆ’

ಬೇಸಿಗೆ ಬಿಸಿಲಿನ ತೀವ್ರತೆ ಜಾಸ್ತಿಯಾಗುತ್ತಿದ್ದಂತೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ. ಬರ ಹಾಗೂ ನೀರಿನ ಸಮಸ್ಯೆ ಪರಿಹರಿಸಲು ಹೆಚ್ಚಿನ ಸಮಯ ನೀಡಬೇಕಾದ ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತಿದೆ.

ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಸಮಸ್ಯೆ ಪರಿಹರಿಸುವ ಹೊಣೆ ಪಿಡಿಒಗಳದ್ದು. ಆದರೆ ಬಹುತೇಕ ಪಿಡಿಒಗಳಿಗೆ ಚುನಾವಣೆ ಕೆಲಸ ಅದರಲ್ಲೂ ಚೆಕ್‌ಪೋಸ್ಟ್‌ನಲ್ಲಿ ಜವಾಬ್ದಾರಿ ಕೊಟ್ಟಿದ್ದು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಡೆತಡೆಯಾಗಿದೆ.

‘ತಾಲ್ಲೂಕಿನ ವಡಗಾಂವ್ ಗ್ರಾಮದ ವಾರ್ಡ್ 1ರಲ್ಲಿ ಕೊಳವೆ ಬಾವಿ ಮೋಟಾರು ಕೆಟ್ಟು ನೀರಿನ ಸಮಸ್ಯೆಯಾಗಿದೆ. ಅಲ್ಲಿನ ಮಹಿಳೆಯರು ಬೇರೆ ಬೇರೆ ಕಡೆ ಸುತ್ತಿ ನೀರು ತರಬೇಕಿದೆ. ಆದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ವಡಗಾಂವ್ ನಿವಾಸಿ ಮಹೇಂದ್ರಸಿಂಗ್ ಠಾಕೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಡಗಾಂವ್‍ನಲ್ಲಿ ನೀರಿನ ಸಮಸ್ಯೆ ಆಗಿರುವುದು ನಿಜ. ಮೋಟಾರ್ ದುರಸ್ತಿಗೆ ಕೊಟ್ಟಿದ್ದೇವೆ. ಅದನ್ನು ತಂದು ಕೂಡಿಸಲು ನಮಗೆ ಸಮಯ ಸಿಗದಂತಾಗಿದೆ. ನನಗೂ, ಕಾರ್ಯದರ್ಶಿಗೂ ಚೆಕ್‍ಪೋಸ್ಟ್‌ನಲ್ಲಿ ಕೆಲಸ ಹಚ್ಚಿದ್ದಾರೆ. ಹೀಗಾಗಿ ಪಂಚಾಯಿತಿ ಕೆಲಸ ಮಾಡಲು ಆಗುತ್ತಿಲ್ಲ’ ಎಂದು ಪಿಡಿಒ ಸುಭಾಷ ತಿಳಿಸಿದ್ದಾರೆ.

ತಾಲ್ಲೂಕಿನ ಕೆಲ ಪಿಡಿಒಗಳಿಗೆ ಚೆಕ್‍ಪೋಸ್ಟ್ ಕೆಲಸ ಹಾಕಿದ್ದಾರೆ. ಇದರಿಂದ ಕುಡಿಯುವ ನೀರು, ಉದ್ಯೋಗ ಖಾತರಿಯಂತಹ ಕೆಲಸಕ್ಕೆ ಅಡೆತಡೆ ಆಗುತ್ತಿದೆ. ಈ ಕುರಿತು ಪಿಡಿಒ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸುದೇಶ್ ತಿಳಿಸಿದ್ದಾರೆ.

‘ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ, ರಾಜಕಾರಣಿಗಳು ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡರೆ ಈ ಬೇಸಿಗೆಯಲ್ಲಿ ನಮ್ಮ ತಾಲ್ಲೂಕಿನ ಜನರ ಗತಿ ಏನಾಗಬೇಕು? ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ, ಅನೀಲ ಜಿರೋಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Indian news

Popular Stories