ಸಹಕಾರ Vs ಸಾಹುಕಾರ ಚುನಾವಣೆ: ಸಾಹುಕಾರ ಮನಃಸ್ಥಿತಿಯವರ ಕೈಗೆ ಡಿಸಿಸಿ ಬ್ಯಾಂಕ್ ಕೊಡಬೇಡಿ: ಭಗವಂತ ಖೂಬಾ

WhatsApp Image 2023 10 02 at 4.16.58 PM Bidar, Featured Story, Politics, State News
ಬೀದರ್: ‘ಸಾಹುಕಾರ ಮನಃಸ್ಥಿತಿಯ ವ್ಯಕ್ತಿಯ ಕೈಗೆ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಬಿಡಿಸಿಸಿ) ಅಥವಾ ಸಹಕಾರ ಕ್ಷೇತ್ರ ಹೋದರೆ ಈ ಕ್ಷೇತ್ರವು ಬಂಡವಾಳಷಾಹಿ ಕ್ಷೇತ್ರವಾಗಿ ಬದಲಾಗುವ ಆತಂಕವಿದೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು. ಹಣದ ಪ್ರಭಾವದಿಂದ ಸ್ವಾರ್ಥ ಸಾಧನೆಗಾಗಿ ಡಿಸಿಸಿ ಬ್ಯಾಂಕಿನ ಚುನಾವಣೆ ನಡೆಯುವಂತೆ ಮಾಡಲಾಗಿದೆ. ‘ಡೆಲಿಗೇಟ್’ ಸದಸ್ಯರಿಗೆ ಹಣದ ಆಮಿಷ ಒಡ್ಡಲಾಗುತ್ತಿದೆ. ಅನೇಕ ಮತದಾರರು ತೀರ್ಥಯಾತ್ರೆಗೆ ಹೋಗಿದ್ದಾರೆ. ‘ಡೆಲಿಗೇಟ್’ ಮತದಾರರು ಹಣದ ಆಮಿಷಕ್ಕೆ ಒಳಗಾಗಬಾರದು. ರಾಜಕೀಯ ಪ್ರಭಾವಕ್ಕೂ ಮಣಿಯಬಾರದು. ರೈತರ ಹಿತ ಕಾಪಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಬ್ಯಾಂಕ್ ಉಳಿದರೆ ಸಹಕಾರ ಕ್ಷೇತ್ರ ಉಳಿಯಲಿದೆ. ಬಂಡವಾಳಷಾಹಿಯ, ಸಾಹುಕಾರರ ನಡವಳಿಕೆಯನ್ನು ದಿಕ್ಕರಿಸೋಣ, ಸೋಲಿಸೋಣ ಎಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚುನಾವಣೆಯು ಸಹಕಾರ ವರ್ಸಸ್ ಸಾಹುಕಾರ ಎನ್ನುವಂತೆ ನಡೆಯುತ್ತಿದೆ. ಜಿಲ್ಲೆಯ ಸಂಸದನಾಗಿ ಸಹಕಾರ ಕ್ಷೇತ್ರವನ್ನು ಉಳಿಸುವುದು ನನ್ನ ಜವಾಬ್ದಾರಿಯಾಗಿದೆ. ಡಿಸಿಸಿ ಬ್ಯಾಂಕಿನ ಷೇರುದಾರರು, ಸಾಲಗಾರರ, ಸಿಬ್ಬಂದಿಯ, ಠೇವಣಿದಾರರ ಹಿತ ಕಾಪಾಡುವುದು ನನ್ನ ಕರ್ತವ್ಯದ ಜತೆಗೆ ನೈತಿಕ ಜವಾಬ್ದಾರಿ ಕೂಡ ಆಗಿದೆ. ‘ಡೆಲಿಗೇಟ್’ ಸದಸ್ಯರುಗಳು ಪಿಕೆಪಿಎಸ್ನ ರೈತರ ಹಿತ ರಕ್ಷಣೆಗಾಗಿ ಮತ ಚಲಾಯಿಸಬೇಕು. ಡಿಸಿಸಿ ಬ್ಯಾಂಕ್ ಉಳಿಸಿ, ಬೆಳೆಸುವುದರಿಂದ ರೈತರ ಹಿತ ಕಾಪಾಡಿದಂತಾಗುತ್ತದೆ ಎಂದರು. ‘ಡೆಲಿಗೇಟ್’ ಮತದಾರರು ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಪೆನಾಲ್ಗೆ ಮತ ನೀಡಬೇಕು. ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳಿಗೆ ಹಣ ಒದಗಿಸಿ ಅವುಗಳನ್ನು ನಡೆಯುವಂತೆ ಡಿಸಿಸಿ ಬ್ಯಾಂಕ್ ನೋಡಿಕೊಂಡಿದೆ. ಬ್ಯಾಂಕ್ ರೈತರು, ಸ್ವ ಸಹಾಯ ಗುಂಪುಗಳ ಸದಸ್ಯರ ಜೀವನಾಡಿಯಾಗಿದೆ. ಅದನ್ನು ಉಳಿಸಬೇಕು ಎಂದು ಹೇಳಿದರು. 1984ರಿಂದ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರು ಹಾಗೂ ಕಳೆದ ಎಂಟು ವರ್ಷಗಳಿಂದ ಉಮಾಕಾಂತ ನಾಗಮಾರಪಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿ ಬ್ಯಾಂಕ್ ಅನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. 1984ರಲ್ಲಿ ₹1.61 ಕೋಟಿ ಠೇವಣಿ ಇತ್ತು. ಆರು ಕೋಟಿ ರೈತರಿಗೆ ಸಾಲ ನೀಡಲಾಗಿತ್ತು. 2018ರ ವರೆಗೆ ₹86 ಕೋಟಿ ಠೇವಣಿ ಹೆಚ್ಚಿಸಿ, ₹1660 ಕೋಟಿ ಸಾಲವನ್ನು ನೀಡಿ, ₹2929 ಕೋಟಿ ವಹಿವಾಟವನ್ನು ಗುರುಪಾದಪ್ಪನವರು ನಡೆಸಿದ್ದರು. ಉಮಾಕಾಂತ ನಾಗಮಾರಪಳ್ಳಿ ಅವರು ಅಧ್ಯಕ್ಷರಾದ ಬಳಿಕ ₹1600 ಕೋಟಿಯಿಂದ ₹3268 ಕೋಟಿ ಸಾಲವನ್ನು ರೈತರಿಗೆ ನೀಡಿದ್ದಾರೆ. ₹86 ಕೋಟಿಯಿಂದ ₹159 ಕೋಟಿ ಷೇರು ಹೆಚ್ಚಿಸಿದ್ದಾರೆ ಎಂದು ವರ್ಣಿಸಿದರು. ₹2500 ಕೋಟಿ ಠೇವಣಿ ಇದೆ. ₹5 ಸಾವಿರ ಕೋಟಿ ಬ್ಯಾಂಕ್ ವಹಿವಾಟು ನಡೆಸಿದೆ. ಇದೆಲ್ಲವೂ ಬ್ಯಾಂಕಿನ ಆಡಳಿತ ಮಂಡಳಿ ಮೇಲಿನ ವಿಶ್ವಾಸದಿಂದಲೇ ಸಾಧ್ಯವಾಗಿದೆ. ಫಸಲ್ ಬಿಮಾ, ಸಾಲ ಮನ್ನಾ ಸೇರಿದಂತೆ ವಿವಿಧ ಯೋಜನೆಗಳಡಿ ಬ್ಯಾಂಕ್ನಿಂದ ರೈತರಿಗೆ ₹1800 ಕೋಟಿ ಲಾಭವಾಗಿದೆ. ಡಿಸಿಸಿ ಬ್ಯಾಂಕ್ನಡಿ 37 ಸಾವಿರ ಸ್ವ ಸಹಾಯ ಗುಂಪುಗಳಿದ್ದು, 5.19 ಲಕ್ಷ ಮಹಿಳಾ ಸದಸ್ಯರಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬ್ಯಾಂಕ್ ಗಮನ ಸೆಳೆದಿದೆ. ದೇಶದಲ್ಲಿ ಬೀದರ್ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂದರು.

‘ಖಾಸಗಿ ಕಾರ್ಖಾನೆ ಆರಂಭಿಸಲು ತಯಾರಿ’
‘ಖಂಡ್ರೆ ಪರಿವಾರವು ಖಾಸಗಿ ಸಕ್ಕರೆ ಕಾರ್ಖಾನೆಯನ್ನು ಆರಂಭಿಸುವ ತಯಾರಿಯಲ್ಲಿದೆ. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯು ಖಾಸಗಿಯವರ ಪಾಲಾಗಿದೆ. ಬಿಎಸ್ಎಸ್ಕೆ ಮುಚ್ಚಲಾಗಿದೆ. ಎಂಜಿಎಸ್ಎಸ್ಕೆಗೆ ಬ್ಯಾಂಕ್ನಿಂದ ₹400 ಕೋಟಿ ಸಾಲ ಇದೆ. ಮುಂದಿನ ದಿನಗಳಲ್ಲಿ ಇದು ಕೂಡ ಮುಚ್ಚಿ ಹೋಗಬಹುದು. ಖಾಸಗಿ ಕಾರ್ಖಾನೆ ಸ್ಥಾಪಿಸುವ ತಯಾರಿಯಲ್ಲಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ವಿರೋಧಿಸುವ ಖಂಡ್ರೆಯವರು ಒಂದು ವೇಳೆ ಅವರ ಸಹೋದರ ಬ್ಯಾಂಕಿನ ಅಧ್ಯಕ್ಷರಾದರೆ ರೈತರಿಗೆ ಈ ಯೋಜನೆಯಡಿ ಲಾಭವಾಗದಂತೆ ನೋಡಿಕೊಳ್ಳುತ್ತಾರೆ ಎಂಬ ಆತಂಕ ನನಗಿದೆ’ ಎಂದು ಸಚಿವ ಭಗವಂತ ಖೂಬಾ ಹೇಳಿದರು.

‘ಆಡಳಿತದ ದುರುಪಯೋಗ’
‘ಅಮರ ಖಂಡ್ರೆಯವರು ಬ್ಯಾಂಕಿನ ಏಳಿಗೆಗಿಂತ ಸ್ವಾರ್ಥ ಸಾಧನೆಗಾಗಿ ಅನಿವಾರ್ಯವಾಗಿ ಚುನಾವಣೆಗೆ ಕಾರಣರಾಗಿದ್ದಾರೆ. ಬೀದರ್ನಲ್ಲಿ ಸಹಕಾರ ಕ್ಷೇತ್ರದ ಸೇವಕ ವರ್ಸಸ್ ಸಾಹುಕಾರನ ನಡುವೆ ಚುನಾವಣೆ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಹೋದರನ ಬೆನ್ನಿಗೆ ನಿಂತು ಆಡಳಿತವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ. ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಒತ್ತಡಕ್ಕೆ ಮಣಿಯಬಾರದು. ಇಂದು ಕಾಂಗ್ರೆಸ್ ಸರ್ಕಾರವಿದೆ. ಜನವರಿಯಲ್ಲಿ ನಮ್ಮ ಸರ್ಕಾರ ಕೂಡ ಬರಬಹುದು. ಡಿಸಿಸಿ ಬ್ಯಾಂಕ್ನಿಂದ ನನಗೆ ಯಾವುದೇ ಲಾಭವಿಲ್ಲ. ನನ್ನ ವ್ಯವಹಾರವೂ ಇಲ್ಲ. ಆದರೆ ಬ್ಯಾಂಕ್ ಉಳಿಸಲು ನಾನು ಮುಂದೆ ಬಂದಿದ್ದೇನೆ. ಅದನ್ನು ಉಳಿಸುತ್ತೇನೆ’ ಎಂದು ಸಚಿವ ಭಗವಂತ ಖೂಬಾ ಹೇಳಿದರು.

Latest Indian news

Popular Stories