
ಆಗಸ್ಟ್ 15ರಂದು ಸ್ವಾತಂತ್ರ್ಯೊತ್ಸವ ಪೂರ್ವಭಾವಿ ಸಿದ್ಧತಾ ಸಭೆ
ಬೀದರ ಆಗಸ್ಟ್ 9 (ಕರ್ನಾಟಕ ವಾರ್ತೆ): ಆಗಸ್ಟ್ 15ರಂದು ಆಚರಿಸಲ್ಪಡುವ ಭಾರತದ ಸ್ವಾತಂತ್ರ್ಯೊತ್ಸವ ದಿನಾಚರಣೆಯ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 9ರಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಕೋವಿಡ್ ಹಿನ್ನೆಲೆಯಲ್ಲಿ ಸಮಾರಂಭವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಬೆಳಗ್ಗೆ 8.30 ರೊಳಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣವನ್ನು ಮುಗಿಸಿ, 8.45ರೊಳಗೆ ಜಿಲ್ಲಾ ಪೊಲೀಸ್ ಫರೇಡ್ ಮೈದಾನಕ್ಕೆ ಆಗಮಿಸಬೇಕು. ಅಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುವರು. ಆಯಾ ಇಲಾಖೆಗಳ ಅಧಿಕಾರಿಗಳು ಸರಿಯಾಗಿ ಸಮನ್ವಯ ನಡೆಸಿ ಅಂದು ಸಮಾರಂಭವು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪರೇಡ್‌ನಲ್ಲಿ ಭಾಗವಹಿಸುವ ವಿವಿಧ ಇಲಾಖೆಯ ತುಕಡಿಗಳು ಸಮವಸ್ತçದೊಂದಿಗೆ ಕಾವಾಯತನ್ನು ಅಚ್ಚುಕಟ್ಟಾಗಿ ನಡೆಸಿಕೊಡಬೇಕು. ಕವಾಯತಿನಲ್ಲಿ ಭಾಗವಹಿಸುವ ತುಕಡಿಗಳಿಗೆ ಶುದ್ಧ ಕುಡಿಯುವ ನೀರು, ಬಿಸ್ಕಿಟ್ ಮತ್ತು ಬಾಳೆ ಹಣ್ಣಿನ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸುಸಜ್ಜಿತವಾದ ಅಂಬ್ಯುಲೆನ್ಸ್ ವ್ಯವಸ್ಥೆ ಹಾಗೂ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿರಬೇಕು. ಪ್ರವೇಶ ದ್ವಾರದಲ್ಲಿ ಥರ್ಮ್ಲ್ ಸ್ಕಾನಿಂಗ್ ಮತ್ತು ಸ್ಯಾನಿಟೈಜರ್ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮಕ್ಕೆ ಮೊದಲು ಮೈದಾನವನ್ನು ಸೋಂಕು ಮುಕ್ತಗೊಳಿಸಬೇಕು. ಅಡೆತಡೆ ಇಲ್ಲದೇ ವಿದ್ಯುತ್ ಸರಬರಾಜು, ಧ್ವನಿವರ್ಧಕ ಹಾಗೂ ವೀಕ್ಷಕ ವಿವರಣೆಗಾರರ ವ್ಯವಸ್ಥೆಯನ್ನು ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದರು.
ಸ್ವಾತಂತ್ರ್ಯೊತ್ಸವ ಕಾರ್ಯಕ್ರಮಕ್ಕೆ ಮೊದಲು ಎಲ್ಲಾ ಆಸನಗಳನ್ನು ಸೋಂಕು ಮುಕ್ತಗೊಳಿಸಲು ಕ್ರಮ ವಹಿಸಬೇಕು. ಶಿಷ್ಠಾಚಾರದ ರೀತ್ಯಾ ಎಲ್ಲ ಜನಪ್ರತಿನಿಧಿಗಳಿಗೆ ಆಸನಗಳ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಸಮಾರಂಭಕ್ಕೆ ಆಗಮಿಸುವ ಗಣ್ಯರು, ಅಧಿಕಾರಿಗಳಿಗೆ ವೇದಿಕೆ ಪಕ್ಕದಲ್ಲಿ ಕೂಡಲು ಸರಿಯಾದ ಆಸನ ವ್ಯವಸ್ಥೆ ಮಾಡಲು ನಗರಸಭೆ ಆಯುಕ್ತರು, ಡಿಎಚ್‌ಓ ಮತ್ತು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದರು. ಶಿಷ್ಠಾಚಾರದ ರೀತ್ಯಾ ಆಹ್ವಾನ ಪತ್ರಿಕೆಗಳನ್ನು ತಲುಪಿಸಲು ಹಾಗೂ ಆಹ್ವಾನ ಪತ್ರಿಕೆಗಳ ವಿತರಣೆಯ ಬಗ್ಗೆ ಯಾವುದೇ ದೂರುಗಳು ಬಾರದಂತೆ ಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಭದ್ರತೆ ಸುರಕ್ಷತೆ: ಅಂದು ಬೆಳಿಗ್ಗೆ 8.30ಕ್ಕೆ ಅಗ್ನಿ ಶಾಮಕ ವಾಹನ ಹಾಗೂ ಸಿಬ್ಬಂದಿ ಪೊಲೀಸ್ ಪರೇಡ್ ಮೈದಾನದಲ್ಲಿ ಹಾಜರಿರಬೇಕು. ನುರಿತ ಸಿಬ್ಬಂದಿಯುಳ್ಳ ಅಂಬ್ಯೂಲನ್ಸ್ ಹಾಗೂ ವೈದ್ಯಾಧಿಕಾರಿಗಳು ಕೂಡ ಮೈದಾನದಲ್ಲಿರಬೇಕು. ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಲು ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟಗೀತೆ, ನಾಡಗೀತೆ ಮತ್ತು ರೈತಗೀತೆ ಹಾಡಲು ಸಾಮಾಜಿಕ ಅಂತರ ಕಾಪಾಡಿಕೊಂಡು ಸೂಕ್ತ ವ್ಯವಸ್ಥೆ ಮಾಡಲು ಇದೆ ವೇಳೆ ಜಿಲ್ಲಾಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಸಾಧಕರಿಗೆ ಸನ್ಮಾನ: ಪ್ರತಿ ವರ್ಷದಂತೆ ಈ ವರ್ಷವೂ ಸನ್ಮಾನ ಸಮಾರಂಭವು ಸರಳವಾಗಿ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಜೀವದ ಹಂಗು ತೊರೆದು ಕೋವಿಡ್ ತಡೆಗೆ ಶ್ರಮಿಸಿದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು, ಕೋವಿಡ್ ಕಾರ್ಯಾಚರಣೆಗೆ ಶ್ರಮಿಸಿದವರು ಸೇರಿದಂತೆ ಇನ್ನೀತರರಿಗೆ ಇದೆ ವೇಳೆ ಸನ್ಮಾನಿಸಲಾಗುವದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾರ್ವಜನಿಕರಲ್ಲಿ ಮನವಿ: ಸ್ವಾತಂತ್ರೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿತರು ಮತ್ತು ಸಾರ್ವಜನಿಕರು ಕಡ್ಡಾಯ ಮುಖಗವುಸು ಧರಿಸಿ ಆಗಮಿಸಬೇಕು. ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಕೋರಿದರು.
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಸಿದ್ರಮಾ ಶಿಂಧೆ, ವಾರ್ತಾಧಿಕಾರಿ ಗವಿಸಿದ್ದಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.




