ಕೃಷಿ ವಲಯಕ್ಕೆ ಮೊದಲ ಆದ್ಯತೆ: ಬಿಎಸ್‌ವೈ

ಕಲಬುರಗಿ: ಕೃಷಿ ವಲಯ ರಾಜ್ಯದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಲ್ಲಿ ಹೇಳಿದರು.
ನಗರದ ಎಂಎಸ್‌ಕೆ ಮಿಲ್ ಪ್ರದೇಶದಲ್ಲಿ ಕುಡಾದ ಜಾಗದಲ್ಲಿ 26 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ತರಕಾರಿ ಮಾರುಕಟ್ಟೆ ಸಂಕಿರಣಕ್ಕೆ ಶನಿವಾರ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಸಹ ಕೃಷಿಗೆ ಪ್ರಮುಖ ಆದ್ಯತೆ ನೀಡಿದೆ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ವಿಶೇಷ ಕಿಸಾನ್ ರೈಲ್ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.
ಶೋಭಾ ಕರಂದ್ಲಾಜೆ ಅವರು ಕೇಂದ್ರದ ಕೃಷಿ ಸಚಿವರಾಗಿದ್ದು, ರೈತಪರ ಧ್ವನಿಯಾಗಲಿದ್ದಾರೆ. ರಾಜ್ಯದಾದ್ಯಂತ ಪ್ರವಾಸಗೈದು ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಸಿಎಂ ಹೇಳಿದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸಂಸದ ಡಾ. ಉಮೇಶ ಜಾಧವ್ ಮಾತನಾಡಿದರು. ಲೋಕೋಪಯೋಗಿ ಸಚಿವರಾಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮತ್ತಿತರ ಗಣ್ಯರು ಇದ್ದರು.
ಸಚಿವ ಸಂಪುಟ ವಿಸ್ತರಣೆ ಇಲ್ಲ:
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ, ಚಿಂತನೆ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಲ್ಲಿ ಸ್ಪಷ್ಟಪಡಿಸಿದರು.
ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆಗೆ ಬಂದರೆ ಮಾಧ್ಯಮಗಳಿಗೆ ತಿಳಿಸಲಾಗುತ್ತದೆ ಎಂದರು.
ಕಲಬುರಗಿ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಆಗಮಿಸಿದ್ದೇನೆ. ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.ಕೋವಿಡ್ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಸದ್ಯ ಕಾಬಿನೆಟ್ ಸಭೆ ನಡೆಸುವುದಿಲ್ಲ ಎಂದೂ ಯಡಿಯೂರಪ್ಪ ಹೇಳಿದರು.
ಮಂಡ್ಯ ಸಂಸದೆ ಸುಮಲತಾ ಮತ್ತು ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಈ ರೀತಿ ಕಚ್ಚಾಡಾವುದು ಅವಶ್ಯಕತೆ ಇಲ್ಲ. ಎಲ್ಲರೂ ಸಹೋದರರಂತೆ ಬಾಳುವದನ್ನು ಕಲಿಬೇಕು. ಅಲ್ಲಿನ ಅಭಿವೃದ್ಧಿ ಬಗ್ಗೆ ಎಲ್ಲರು ಒಟ್ಟಾಗಿ ಹೋಗಬೇಕು. ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು ನನಗೆ ಸಮಾಧಾನವಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Latest Indian news

Popular Stories