ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಪ್ರಭು ಚವ್ಹಾಣ


ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಧಿಕಾರಿಗಳು ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ನೀರಿನ ಸಮಸ್ಯೆ ತೀವ್ರವಾಗಿರುವ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ತ್ವರಿತವಾಗಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷೇತ್ರದ ಯಾವೊಂದು ಗ್ರಾಮದಲ್ಲಿಯೂ ನೀರಿನ ಸಮಸ್ಯೆ ಇರದಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಅಧಿಕಾರಿಗಳು‌ ಕೇವಲ ಸಭೆ ನಡೆಸುವುದರಿಂದ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಗ್ರಾಮಗಳಿಗೆ ಭೇಟಿ ನೀಡಬೇಕು. ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆಗಳಿವೆ. ಅಂತಹ ಗ್ರಾಮಗಳ ಪಟ್ಟಿ ಮಾಡಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.

ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಬೇಸಿಗೆ ಮುಗಿಯುವ ವರೆಗೆ ಕೆಂದ್ರ ಸ್ಥಾನದಲ್ಲಿ ಲಭ್ಯವಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದಿದ್ದಾರೆ.

ಸಮರ್ಪಕ ಕುಡಿಯುವ ನೀರಿನ ಪೂರೈಕೆಗಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಎಲ್ಲ ಕೆಲಸಗಳನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದೆಂದು ಶಾಸಕರು ಕಟ್ಟು ನಿಟ್ಟಾಗಿ ಸೂಚಿಸಿದ್ದಾರೆ.

Latest Indian news

Popular Stories