ಚಾಮರಾಜನಗರ: ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷೆ-ಉಪಾಧ್ಯಕ್ಷರು ತಮ್ಮ ಸ್ವಂತ ಮನೆಯ ಗೃಹಪ್ರವೇಶದ ರೀತಿಯಲ್ಲಿ ಪತಿ ಪತ್ನಿ ಜತೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹೋಮ ಹವನ ಮಾಡಿದ್ದಾರೆ ಎಂದು ಪುಣಜನೂರು ಗ್ರಾಪಂ ಆರು ಮಂದಿ ಸದಸ್ಯರು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓಗೆ ದೂರು ನೀಡಿದ್ದಾರೆ.
ತಾಲೂಕಿನ ಕಾಡಂಚಿನಲ್ಲಿರುವ ಪುಣಜನೂರು ಗ್ರಾಪಂ ಅಧ್ಯಕ್ಷೆ ಶಿವಿಬಾಯಿ ಮತ್ತು ಆಕೆ ಪತಿ ಗಣೇಶ ನಾಯ್ಕ, ಗ್ರಾಪಂ ಉಪಾಧ್ಯಕ್ಷ ರಾಚಯ್ಯ ಹಾಗೂ ಅವರ ಪತ್ನಿ ಮಂಗಳಮ್ಮ, ಸದಸ್ಯೆ ಗೀತಾ ಮತ್ತು ಅವರ ಪತಿ ಸಿದ್ದರಾಜು ಈ ಮೂವರು ಸಹ ಸದಸ್ಯರಲ್ಲದ ತಮ್ಮ ಪತಿ ಪತ್ನಿಯ ಜೊತೆ ಸೇರಿ ಸೋಮವಾರ ಬೆಳಗ್ಗೆ 7 ಗಂಟೆಯ ಸಮಯದಲ್ಲಿ ಕಚೇರಿಯಲ್ಲಿ ಹೋಮ ಹವನ ಮಾಡಿದ್ದಾರೆ. ಸರ್ಕಾರಿ ನಿಯಮಗಳ ಪ್ರಕಾರ ಸರ್ಕಾರಿ ಕಟ್ಟಡಗಳಲ್ಲಿ ಹೋಮ ಹವನ ನಡೆಸುವಂತಿಲ್ಲ. ಜತೆಗೆ ಸದಸ್ಯರ ಪತಿ ಪತ್ನಿ ಸದಸ್ಯರಲ್ಲದಿದ್ದರೂ ಭಾಗವಹಿಸುವಂತಿಲ್ಲ ಎಂದು ಆರೋಪಿಸಿ ದೂರು ನೀಡಲಾಗಿದೆ. ಈ ಬಗ್ಗೆ ಗ್ರಾಪಂ ಪಿಡಿಒ ಸಿದ್ದರಾಜು ಅವರನ್ನು ಪ್ರಶ್ನೆ ಮಾಡಿದರೆ, ನನಗೇನೂ ಗೊತ್ತಿಲ್ಲ. ಅಧ್ಯಕ್ಷರ ಪತಿ ಕಚೇರಿಯ ಕೀ ಕೊಡಿ ಎಂದು ಕೇಳಿದ್ದರು. ಹೀಗಾಗಿ ಅವರಿಗೆ ಕೊಟ್ಟಿದ್ದೆ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸುಮಾರು 1 ಗಂಟೆಗೂ ಹೆಚ್ಚು ಕಾಲ ಪುರೋಹಿತರನ್ನು ಆಹ್ವಾನಿಸಿ, ಕಚೇರಿಯ ಹಾಲ್‌ನಲ್ಲಿಯೇ ಹೋಮ ಕುಂಡ ಇಟ್ಟು ಮೂವರು ಸಹ ಪತಿ ಪತ್ನಿ ಸಮೇತ ಭಾಗವಹಿಸಿದ್ದಾರೆ. ಸರ್ಕಾರಿ ಕಚೇರಿಯ ಕರ್ತವ್ಯದ ವೇಳೆಯನ್ನು ಹೊರತುಪಡಿಸಿ, ಅಕ್ರಮವಾಗಿ ಕಚೇರಿ ಪ್ರವೇಶ ಮಾಡಿ, ಬೆಳಗ್ಗೆಯೇ ಹೋಮ ಹವನ ಮಾಡಿದ್ದಾರೆ. ಸಂವಿಧಾನದ ಪ್ರಕಾರ ಸರ್ಕಾರಿ ಕಚೇರಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುವಂತಿಲ್ಲ ಎಂದು ಗ್ರಾಪಂ ಸದಸ್ಯ ಚಂದ್ರಶೇಖರ್ ದೂರಿದ್ದಾರೆ.
ಈ ಮೂವರು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯೆ ವಿರುದ್ದ ಪ್ರಕರಣ ದಾಖಲು ಮಾಡಿ, ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಪುಣಜನೂರು ಗ್ರಾಪಂ ಸದಸ್ಯರಾದ ಚಂದ್ರಶೇಖರ್, ಸಬೀನಾಬಾನು, ಪಿ.ನಾಗನಾಯಕ, ಕುಮಾರ್ ಸುಶೀಲಾ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.