ಬೆಂಗಳೂರು: ನೆರೆಯ ತಮಿಳುನಾಡಿಗೆ 10 ಟಿಎಂಸಿ ಕಾವೇರಿ ನದಿ ನೀರನ್ನು ಬಿಡಲಾಗುವುದು ಎಂದು ಜಲಸಂಪನ್ಮೂಲ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ. ಆದರೆ, ಕರ್ನಾಟಕದ ಜಲಾಶಯದಲ್ಲಿ ಸಮರ್ಪಕ ನೀರಿಲ್ಲ ಎಂದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಸಾಕಷ್ಟು ನೀರು ಇಲ್ಲ. ಆದರೆ ನಾವು 10 ಟಿಎಂಸಿ ನೀರು ಬಿಡುತ್ತೇವೆ ಎಂದರು. ನೀರು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಈಗಾಗಲೇ ಕರ್ನಾಟಕ ಸರ್ಕಾರ ಈ ಕೆಲಸ ಮಾಡುತ್ತಿದೆ ಎಂದರು.
ಈ ಮಧ್ಯೆ ತಮಿಳುನಾಡು ತನ್ನ ಬೆಳೆಗಳಿಗೆ ನೀರನ್ನು ಅತಿಯಾಗಿ ಬಳಸಿಕೊಂಡಿರುವುದರಿಂದ ಕರ್ನಾಟಕ ಕಾವೇರಿ ನೀರು ಬಿಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ತಮಿಳುನಾಡು 1.8 ಲಕ್ಷ ಹೆಕ್ಟೇರ್‌ನಲ್ಲಿ 32 ಟಿಎಂಸಿ ನೀರು ಬಳಸಬೇಕಿತ್ತು ಆದರೆ ಇದು ಬೆಳೆ ಪ್ರದೇಶವನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ಕರ್ನಾಟಕ ಸರ್ಕಾರದ ಅಧಿಕಾರಿಗಳು ಯಾವುದೇ ಪ್ರತಿಭಟನೆ ಮಾಡದೆ ಸುಮ್ಮನಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.