Corruption : ಮಡಿಕೇರಿ ತಾಲೂಕಿನ ಕಾರಗುಂದ ಗ್ರಾಮ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

ಮಡಿಕೇರಿ ಏ.೧೭ : Corruption ಪೌತಿ ಖಾತೆಯಲ್ಲಿ ಹೆಸರು ಸೇರ್ಪಡೆಗಾಗಿ ವ್ಯಕ್ತಿಯೊಬ್ಬರಿಂದ ಲಂಚದ ರೂಪದಲ್ಲಿ ಹಣ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗನನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. ಮಡಿಕೇರಿ ತಾಲೂಕಿನ ಕಾರಗುಂದ ಗ್ರಾಮ ಲೆಕ್ಕಿಗ ದೇವಯ್ಯ ಎಂಬವರೇ ಬಂಧಿತ ಸರಕಾರಿ ನೌಕರನಾಗಿದ್ದು, ಆರೋಪಿಯಿಂದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ
ಕಾರಗುAದ ನಿವಾಸಿ ಎಂ.ಎನ್ ಯೋಗೇಶ್ ಅವರ ಸರ್ವೇ ನಂಬರ್ ೨೨೬/೧೧ರಲ್ಲಿ ೦.೭೦ ಎಕರೆ ಹಾಗೂ ೨೨೪/೬ರಲ್ಲಿ ೨.೨೦ ಎಕರೆ ಆಸ್ತಿ ಇದ್ದು, ಆರ್.ಟಿ.ಸಿಯಲ್ಲಿ ಮೃತರ ಹೆಸರನ್ನು ತೆಗೆದು ಎಂ.ಎನ್. ಯೋಗೇಶ್ ಹೆಸರು ಸೇರ್ಪಡೆಗಾಗಿ ಮಾರ್ಚ್ ತಿಂಗಳಲ್ಲಿ ಮಡಿಕೇರಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಅರ್ಜಿ ಕಾರಗುಂದ ಗ್ರಾಮ ಲೆಕ್ಕಿಗರ ಕಚೇರಿಗೆ ವಿಲೇವಾರಿಯಾಗಿತ್ತು. ಈ ನಡುವೆ ಯೋಗೇಶ್ ಅವರು ಕಾರಗುಂದ ಗ್ರಾಮ ಲೆಕ್ಕಿಗ ದೇವಯ್ಯ ಅವರ ಬಳಿ ವಿಚಾರಿಸಿದಾಗ ಕಾಲಿ ಕೈಯಲ್ಲಿ ಕಚೇರಿಗೆ ಬರವೇಡವೆಂದು ಹೇಳಿದ್ದರು ಎನ್ನಲಾಗಿದೆ.
ತದನಂತರ ಯೋಗೇಶ್ ಅವರು ಅನಾರೋಗ್ಯಕ್ಕೆ ಒಳಗಾದ ಸಂದರ್ಭ ಪೌತಿ ಖಾತೆ ಹೆಸರು ಬದಲಾವಣೆ ಮಾಡಿಸಿ ಕೊಡುವಂತೆ ಕಾರಗುಂದ ನಿವಾಸಿಯಾದ ಬೊಳದಂಡ ನಾಚಪ್ಪ ಅವರನ್ನು ಯೋಗೇಶ್ ಕೋರಿದ್ದರು. ಅದರಂತೆ ಏ.೮ರಂದು ನಾಚಪ್ಪ ಅವರು ಗ್ರಾಮ ಲೆಕ್ಕಿಗರ ಕಚೇರಿಗೆ ತೆರಳಿ ವಿಚಾರಣೆ ನಡೆಸಿದ ಸಂದರ್ಭ ಪೌತಿ ಖಾತೆ ಬದಲಾವಣೆಗೆ ೨೫೦೦ರೂ. ನೀಡುವಂತೆ ಗ್ರಾಮ ಲೆಕ್ಕಿಗ ದೇವಯ್ಯ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಏ.೧೬ರಂದು ಬೊಳದಂಡ ನಾಚಪ್ಪ ಅವರು ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲಿಖಿತ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. ಅದರಂತೆ ಬೊಳದಂಡ ನಾಚಪ್ಪ ಅವರಿಂದ ಗ್ರಾಮ ಲೆಕ್ಕಿಗ ದೇವಯ್ಯ ಅವರು ೨೫೦೦ರೂ. ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭ ಮೈಸೂರು, ಕೊಡಗು ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿ ಗ್ರಾಮ ಲೆಕ್ಕಿಗನನ್ನು ಬಂಧಿಸಿ ೨೫೦೦ರೂ ನಗದನ್ನು ವಶಕ್ಕೆ ಪಡೆದರು.
ಮೈಸೂರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಉಪ ಅಧೀಕ್ಷಕ ಸದಾನಂದ ಎ.ತಿಪ್ಪಣ್ಣವರ್, ವೃತ್ತ ನಿರೀಕ್ಷಕ ಎನ್.ಪಿ. ಹರೀಶ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಫೋಟೋ :: ಎಸಿಬಿ

Latest Indian news

Popular Stories