ಒಂದೆರೆಡು ತಿಂಗಳ ಹಿಂದೆ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ಯಲ್ಲಿ ಕೊಡಗಿನ ವ್ಯಕ್ತಿಯೊಬ್ಬರು ದರೋಡೆಗೆ ಒಳಗಾಗಿ ಚಿನ್ನದ ಸರವನ್ನು ಕಳೆದುಕೊಂಡ ಪ್ರಕರಣ ಇನ್ನೂ ಕಣ್ಣಮುಂದೆ ಇರುವಾಗಲೇ ಮತ್ತೊಂದು ದರೋಡೆ ಕೃತ್ಯ ಇದೇ ಹೆದ್ದಾರಿಯಲ್ಲಿ ನಡೆದಿದೆ.
ಪೊಲೀಸರ ಸೋಗಿನಲ್ಲಿ ಬಂದ ದರೋಡೆಕೋರರಿಬ್ಬರು ಕೊಡಗಿನ ದಂಪತಿಯನ್ನು ಸುಲಿಗೆ ಮಾಡಿರುವುದು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ. ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿಯ ವರ್ತಕ ಚಲನ್ ಹಾಗೂ ಅವರ ಪತ್ನಿ ಸೋಮವಾರ ಮುಂಜಾನೆ ಬೆಂಗಳೂರಿನಿಂದ ಕಾರಿನಲ್ಲಿ ಹಿಂತಿರುಗಿ ಬರುತ್ತಿದ್ದಾಗ ಶ್ರೀರಂಗ ಪಟ್ಟಣದ ಗಂಜಮ್ ಬಳಿ ನಂಬರ್ ಪ್ಲೇಟ್ ಇಲ್ಲದ ಸ್ಕೂಟಿಯಲ್ಲಿ ಪೊಲೀಸರ ಸೋಗಿನಲ್ಲಿದ್ದ ದರೋಡೆಕೊರರಿಬ್ಬರು ತಡೆದು ನಿಲ್ಲಿಸಿದ್ದಾರೆ. ನಾವು ಪೊಲೀಸರೆಂದು ಹೇಳಿಕೊಂಡ ಇವರ ಪೈಕಿ ಓರ್ವ ಡ್ರೈವರ್ ಸೀಟ್ ನಲ್ಲಿ ಕುಳಿತಿದ್ದ ಚಲನ್ ರವರನ್ನು ಪಕ್ಕಕ್ಕೆ ಸರಿಸಿ ತಾನೇ ಕುಳಿತುಕೊಂಡಿದ್ದಾನೆ.
ನಂತರ ದಾಖಲಾತಿಗಳನ್ನು ಪರಿಶೀಲನೆ ಮಾಡುವ ನಾಟಕ ವಾಡಿದ್ದಾನೆ. ಈ ಸಂದರ್ಭ ಮತ್ತೋರ್ವ ತಲ್ವಾರ್ ತೋರಿಸಿ ಚಿನ್ನ… ದುಡ್ಡನ್ನೆಲ್ಲಾ ಕೊಡುವಂತೆ ಬೆದರಿಸಿದ್ದಾನೆ. ನಂತರ ಇವರಿಬ್ಬರು 30 ಗ್ರಾಂ ತೂಕ ಹಾಗೂ 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಅಪಹರಿಸಿ, ಚಲನ್ ರವರ ಪತ್ನಿಯ ಕೊರಳಲ್ಲಿದ್ದ ತಾಳಿಯನ್ನು ಬಿಚ್ಚಿಕೊಡುವಂತೆ ತಾಕೀತು ಮಾಡಿದ್ದಾರೆ. ಆದರೆ ತಾಳಿ ಕೊಡಲು ಸುತರಾಮ್ ಒಪ್ಪದ ಚಲನ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಪಾರಾಗಿದ್ದಾರೆ. ಈ ಸಂಬಂಧ ದರೋಡೆಗೊಳಗಾದ ದಂಪತಿ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪುಕಾರು ನೀಡಿದ್ದಾರೆ.