ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಮಸೂದೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಶ್ರೀಮಂತ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯನ್ನು ಆದಾಯ ಇಲ್ಲದಿರುವ ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ.
ಕಾರಣ ನೀಡಿದ ರಾಜ್ಯಪಾಲರು
‘ಹೈಕೋರ್ಟ್‌ನ ಧಾರವಾಡ ಪೀಠವು ರಿಟ್ ಅರ್ಜಿ 3440/2005ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ –1997 ಮತ್ತು ಅದಕ್ಕೆ ತಂದಿರುವ ತಿದ್ದುಪಡಿಗಳನ್ನು ಈಗಾಗಲೇ ವಜಾ ಮಾಡಿದೆ. ಹೈಕೋರ್ಟ್ ನೀಡಿದ್ದ ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಅಂತಿಮ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ತಿದ್ದುಪಡಿ ಮಾಡಬಹುದೇ ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ’ ಎಂದು ಉಲ್ಲೇಖಿಸಿರುವ ರಾಜ್ಯಪಾಲರು ಕಡತವನ್ನು ವಾಪಸ್ ಕಳುಹಿಸಿದ್ದಾರೆ.
ಸರ್ಕಾರಕ್ಕೆ ರಾಜ್ಯಪಾಲರ ಚಾಟಿ
‘ಇತರೆ ಧಾರ್ಮಿಕ ಸಂಸ್ಥೆಗಳನ್ನೂ ಸೇರಿಸುತ್ತೀರಾ?’ ‘ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿ ತರಲಾದ ತಿದ್ದುಪಡಿಯನ್ನು ಇತರೆ ಧಾರ್ಮಿಕ ಸಂಸ್ಥೆಗಳನ್ನೂ ಸೇರಿಸಿಕೊಂಡು ಈ ಮಸೂದೆ ಮಾದರಿಯಲ್ಲಿ ಯಾವುದಾದರೂ ಕಾಯ್ದೆ ಮಾಡುವ ಪರಿಕಲ್ಪನೆ ರಾಜ್ಯ ಸರ್ಕಾರಕ್ಕೆ ಇದೆಯೇ’ ಎಂದು ರಾಜ್ಯ ಪಾಲ ಗೆಹಲೋಟ್ ಪ್ರಶ್ನಿಸಿದ್ದಾರೆ. ವಾಪಸ್ ಕಳುಹಿಸಿರುವ ಮಸೂದೆಗೆ ಸಂಬಂಧಿಸಿದ ಕಡತದಲ್ಲಿ ಈ ಕುರಿತು ಅವರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಈ ಮಸೂದೆಯನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ದೇವಸ್ಥಾನಗಳ ಮಹಾಸಂಘ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಮಸೂದೆ–2024’ ಅನ್ನು ಸರ್ಕಾರ ಬಜೆಟ್ ಅಧಿವೇಶನದಲ್ಲಿ ಮಂಡಿಸಿತ್ತು. ಈ ಮಸೂದೆಗೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿಧಾನಪರಿಷತ್‌ನಲ್ಲಿ ಧ್ವನಿಮತಕ್ಕೆ ಹಾಕಿದಾಗ ಮಸೂದೆಗೆ ಸೋಲು ಉಂಟಾಗಿತ್ತು. ವಿಧಾನಸಭೆಯಲ್ಲಿ ಎರಡನೇ ಬಾರಿ ಮಂಡಿಸಿ ಮಸೂದೆಗೆ ಅಂಗೀಕಾರ ಪಡೆದು, ಮತ್ತೆ ಪರಿಷತ್‌ನಲ್ಲಿ ಮಂಡಿಸಿತ್ತು. ಗದ್ದಲದ ನಡುವೆಯೇ ಸರ್ಕಾರ ಅನುಮೋದನೆ ಪಡೆದುಕೊಂಡಿತ್ತು. ‘ರಾಜ್ಯಪಾಲರು ಕೇಳಿದ ವಿಷಯಗಳಿಗೆ ಸ್ಪಷ್ಟನೆ ನೀಡಿ ಮಸೂದೆಯನ್ನು ಅವರ ಒಪ್ಪಿಗೆಗೆ ಮತ್ತೆ ಕಳುಹಿಸಲಾಗುವುದು’ ಎಂದು ರಾಜ್ಯ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ತಿದ್ದುಪಡಿ ಮಸೂದೆಯಲ್ಲಿ ಏನಿದೆ?
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಯ ವ್ಯಾಪ್ತಿಯಲ್ಲಿರುವ ₹1 ಕೋಟಿಗೂ ಹೆಚ್ಚು ವರಮಾನ ಹೊಂದಿರುವ ದೇವಸ್ಥಾನಗಳ ಹುಂಡಿಯಿಂದ ವರ್ಷಕ್ಕೆ ಶೇ 10ರಷ್ಟು ಮತ್ತು ₹10 ಲಕ್ಷದಿಂದ ₹1 ಕೋಟಿವರೆಗಿನ ವರಮಾನ ಹೊಂದಿರುವ ದೇವಸ್ಥಾನಗಳಿಂದ ಶೇ 5ರಷ್ಟನ್ನು ‘ಸಾಮಾನ್ಯ ಸಂಗ್ರಹಣಾ ನಿಧಿ’ಗೆ ಸಂದಾಯ ಮಾಡುವುದು ಮತ್ತು ಹೀಗೆ ಸಂಗ್ರಹವಾಗುವ ನಿಧಿಯನ್ನು ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಾಲ್ವರು ಸಾಮಾನ್ಯ ಸದಸ್ಯರಲ್ಲಿ ವಿಶ್ವಕರ್ಮ ಸಮುದಾಯದ ಒಬ್ಬರಿಗೆ ಅವಕಾಶ. ಮುಜರಾಯಿ ದೇವಸ್ಥಾನಗಳ ಜಮೀನುಗಳ ಒತ್ತುವರಿ ತೆರವಿಗೆ ಕಾರ್ಯಪಡೆ ರಚಿಸುವ ಪ್ರಸ್ತಾವವೂ ಇದೆ.