ಲಕ್ಷಾಂತರ ರೂ. ದರೋಡೆ: ಆರೋಪಿಗಳು ಅಂದರ್

ವಿಜಯಪುರ : ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಕೊಲ್ಹಾರದಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ದರೋಡೆ ಮಾಡಿದ ಪ್ರಕರಣವನನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾಂತೇಶ ಶಿವಗೊಂಡ ತಳವಾರ, ಧರೇಶ ರೇವಣಸಿದ್ಧ ದಳವಾಯಿ, ಶಿವಪ್ಪ ಶರಣಪ್ಪ ಮಾಶ್ಯಾಳ, ಸುನೀಲ ರಾಮಪ್ಪ ವಡ್ಡರ, ಶಿವಾನಂದ ದಳವಾಯಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಸುಲಿಗೆಯಾದ 32,29,364 ಲಕ್ಷ ರೂ.ಗಳ ಪೈಕಿ 31,04,356 ಲಕ್ಷ ರೂ.ಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ.


ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವನೆ ಮಾಹಿತಿ ನೀಡಿ, ಕೊಲ್ಹಾರದಲ್ಲಿ ಲಾರಿ ಚಾಲಕನ ಮೇಲೆ ನಡೆದ ಹಲ್ಲೆ, ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ನಮ್ಮ ಇಲಾಖೆಯ ತಂಡ ಯಶಸ್ವಿಯಾಗಿದ್ದು, ಕೃತ್ಯದಲ್ಲಿ ಕ್ಯಾಂಟರ ಲಾರಿ ಚಾಲಕ ಮಹಾಂತೇಶ ಶಿವಗೊಂಡ ತಳವಾರ ಅವರ ಕೈವಾಡ ಇರುವುದು ಕಂಡು ಬಂದಿದ್ದು, ಆತನ ಮಾಹಿತಿ ಮೇರೆಗೆ ಇನ್ನೂಳಿದ 4 ಜನ ಆರೋಪಿತರು ಬುಲೆರೋ ಪಿಕ್ಅಪ್ ಗೂಡ್ಸ್ ವಾಹನದಲ್ಲಿ ಬಂದು ಕೃತ್ಯ ಎಸಗಿ ಹಣ ದೋಚಿಕೊಂಡು ಹೋಗಿರುತ್ತಾರೆ ಎಂದು ಹೇಳಿದರು.

ಘಟನೆ ಹಿನ್ನೆಲೆ
ಕಳೆದ ಕೆಲವು ದಿನಗಳ ಹಿಂದಷ್ಟೇ ಕೊಲ್ಹಾರ ಪಟ್ಟಣದ ಹೊರ ವಲಯದಲ್ಲಿ ಕ್ಯಾಂಟರ್ ವಾಹನ ತಡೆದ ದುಷ್ಕರ್ಮಿಗಳು ಚಾಲಕ ಮತ್ತೋರ್ವನ ಮೇಲೆ ಖಾರದ ಪುಡಿ ಎರಚಿ ರಾಡ್ ನಿಂದ ಹಲ್ಲೆ ಮಾಡಿ ಕ್ಯಾಂಟರ್ ನಲ್ಲಿದ್ದ ರೂ. 32 ಲಕ್ಷ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು, ಕಲಬುರಗಿ ಜಿಲ್ಲೆಯ ಜೀವರ್ಗಿ ಪಟ್ಟಣದ ಹತ್ತಿ ವ್ಯಾಪಾರಿ ಚಂದ್ರಕಾಂತ ಕುಂಬಾರ ಎಂಬುವರು ರೈತರಿಂದ ಹತ್ತಿ ಸಂಗ್ರಹಿಸಿದ್ದರು. ಅಲ್ಲದೇ, ಈ ಹತ್ತಿಯನ್ನು ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿರೋ ಹತ್ತಿ ಕಾರ್ಖಾನೆಯಲ್ಲಿ ಮಾರಾಟಕ್ಕೆ ಕಳುಹಿಸಿದ್ದರು. ಈ ಹತ್ತಿ ಮಾರಾಟ ಮಾಡಿದ ಕ್ಯಾಂಟರ್ ಚಾಲಕ ಮಹಾಂತೇಶ ಕುಂಬಾರ ಮತ್ತು ಕ್ಲೀನರ್ ಮಲ್ಲು ಕೊಡಚಿ ಹತ್ತಿ ಮಾರಾಟದಿಂದ ದೊರೆತ ರೂ. 32 ಲಕ್ಷ ನಗದು ಹಣದೊಂದಿಗೆ ಜೇವರ್ಗಿಗೆ ವಾಪಸ್ಸಾಗುತ್ತಿದ್ದರು. ಶುಕ್ರವಾರ ತಡರಾತ್ರಿ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿ ಕೆಲವು ದುಷ್ಕ್ರಮಿಗಳು ಬುಲೆರೋ ವಾಹನ ತಂದು ನಿಲ್ಲಿಸಿ ಕ್ಯಾಂಟರ್ ವಾಹನವನ್ನು ಅಡ್ಡಗಟ್ಟಿದ್ದಾರೆ. ಅಷ್ಟೇ ಅಲ್ಲ, ನಂತರ ಕ್ಯಾಂಟರ್ ಮೇಲೆ ಕಲ್ಲು ಎಸೆದು ಗಾಜನ್ನು ಜಖಂ ಮಾಡಿದ್ದಾರೆ. ನಂತರ ಮಹಾಂತೇಶ ಕುಂಬಾರ ಮತ್ತು ಮಲ್ಲು ಕೊಡಚಿ ಅವರ ಕಣ್ಣಿಗೆ ಖಾರದ ಪುಡಿ ಎರಚಿಸಿದ್ದಾರೆ. ಅಲ್ಲದೇ, ಕ್ಯಾಂಟರ್ ನಲ್ಲಿದ್ದ ಇವರಿಬ್ಬರ ಮೇಲೆ ರಾಡ್ ನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ನಡೆದಿತ್ತು.


ಈ ಪ್ರಕರಣವನ್ನು ಬೇಧಿಸಲು ಎಎಸ್ಪಿಗಳಾದ ರಾಮನಗೌಡ ಹಟ್ಟಿ, ಶಂಕರ ಮಾರಿಹಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಗಿರಿಮಲ್ಲ ತಳಕಟ್ಟಿ ಹಾಗೂ ಪೊಲೀಸ್ ಅಧಿಕಾರಿಗಳಾದ ಶರಣಗೌಡ ಗೌಡರ, ಪ್ರವೀಣಕುಮಾರ ಗರೇಬಾಳ, ಯತೀಶಕುಮಾರ ಕೆ.ಎನ್, ಶ್ರೀಮತಿ ಐ.ಆರ್. ಮಾದರ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖೊಟ್ಟಿ ದಾಖಲೆ ಸೃಷ್ಟಿ : ಆರೋಪಿಗಳ ಬಂಧನ

ವಿಜಯಪುರ: ಖೊಟ್ಟಿ ದಾಖಲೆ ಸೃಷ್ಟಿಸಿ ಭೂಗರಣ ಪ್ರಕರಣ ಇಡೀ ಜಿಲ್ಲೆಯಲ್ಲಿಯೇ ಸಂಚಲನ ಮೂಡಿಸಿದ್ದು, ಈ ರೀತಿಯ ಭೂಗರಣ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.


ಬಾಬಾನಗರ ನಿವಾಸಿ ಸಾಹೇಬಗೌಡ ಮಲ್ಲನಗೌಡ ರುದ್ರಗೌಡರ ಅವರಿಗೆ ವಂಚಿಸಿದ ಪ್ರಕರಣ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವನೆ ಮಾಹಿತಿ ನೀಡಿ, ರಾಜು ಮಾಳಪ್ಪ ಮಾನೆ, ದಯಾನಂದ ಅಮಯ್ಯ ಸಂಗಮದ, ಕಿರಣ ವಾಸುದೇವ ಬೇಡೆಕರ, ದಶರಥ ಸಿದ್ಧರಾಮ ಹೊಸಮನಿ, ದತ್ತಾತ್ರೇಯ ಶರಣಪ್ಪ ಶಿವಶರಣ, ಸಾಕೀಫ್ ಬಷೀರ್ಅಹ್ಮದ್ ನಂದವಾಡಗಿ ಸೇರಿದಂತೆ ಇನ್ನೂ ಕೆಲವರು ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಸರ್ವೆಯಲ್ಲಿ ಬರುವ ರಿ.ಸ.ನಂಬರ 48/*/1 ಕ್ಷೆತ್ರ 20 ಎಕರೆ ಜಮೀನು ಮಾಲೀಕನಾದ ಅರ್ಗನ್ ಉರ್ಫ್ ಅಗನು ಧೋಳು ಕಾಳೆ ಅವರ ಹೆಸರಿನಲ್ಲಿ ಖೊಟ್ಟಿ ಆಧಾರ್ ಹಾಗೂ ಪ್ಯಾನ್ ಕಾರ್ಡನ್ನು ಸೃಷ್ಟಿ ಮಾಡಿಕೊಂಡು ಅವುಗಳನ್ನು ಖರೀದಿ ಪತ್ರದಲ್ಲಿ ಖೊಟ್ಟಿ ರೀತಿಯಿಂದ ನಮೂದ ಮಾಡಿ ಖರೀದಿ ಪತ್ರ ತಯಾರು ಮಾಡಿಕೊಂಡು ದೂರುದಾರರ ಕಡೆಯಿಂದ 46,50,000 ರೂ.ಗಳನ್ನು ಪಡೆದುಕೊಂಡು ವಂಚನೆ ಮಾಡಿ, ಮೋಸತನದಿಂದ ಜಮೀನು ಖರೀಧಿ ಹಾಕಿಕೊಟ್ಟಿದ್ದು ಈ ಬಗ್ಗೆ ವಿಜಯಪುರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆಗಾಗಿ ಪೊಲೀಸ್ ಅಧಿಕಾರಿಗಳಾದ ಸುನೀಲಕುಮಾರ ನಂದದೇಶ್ವರ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತನಿಖಾ ತಂಡ 46,50,000 ರೂ. ಗಳನ್ನು ಜಪ್ತ ಮಾಡಲಾಗಿದೆ. ಅಲ್ಲದೇ ಪ್ರಕರಣದಲ್ಲಿ ನಕಲಿ ಆಧಾರ ಕಾರ್ಡ ಹಾಗೂ ಪಾನ್ ಕಾರ್ಡ ಸೃಷ್ಟಿ ಮಾಡಿದವರಿಗೆ ಪತ್ತೆ ಮಾಡಿ ವಿಚಾರಣೆ ಮಾಡುವ ತನಿಖೆ ಪ್ರಗತಿಯಲ್ಲಿದೆ ಎಂದರು.

Latest Indian news

Popular Stories