ಮಾಸ್ಕೋ: ದೀರ್ಘಾವಧಿಯ ಶಿಕ್ಷೆಗೆ ಗುರಿಯಾಗಿ ಜೈಲುವಾಸ ಅನುಭವಿಸುತ್ತಿದ್ದ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರು ಆರ್ಕ್ಟಿಕ್ ವೃತ್ತದ ಉತ್ತರದಲ್ಲಿರುವ ಪೆನಾಲ್ ಕಾಲೋನಿಯಲ್ಲಿ ಕುಸಿದು ಪ್ರಜ್ಞೆ ಕಳೆದುಕೊಂಡ ನಂತರ ಶುಕ್ರವಾರ ನಿಧನ ಹೊಂದಿದ್ದಾರೆ ಎಂದು ರಷ್ಯಾದ ಜೈಲು ಸೇವೆ ತಿಳಿಸಿದೆ.
ನವಲ್ನಿ, ರಷ್ಯಾದ ಅತ್ಯಂತ ಜನಪ್ರಿಯ ವಿಪಕ್ಷ ನಾಯಕ, ಒಂದು ದಶಕದ ಹಿಂದೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಟೀಕಿಸಿ, ವ್ಯಾಪಕ ಪ್ರಮಾಣದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಮಾಡಿ ಸಮರ ಸಾರಿದ್ದರು. ನವಲ್ನಿ ಅವರಿಗೆ 47 ವರ್ಷ ಪ್ರಾಯ.
ಜೈಲು ಸೇವೆಯ ಪ್ರಕಾರ, ನವಲ್ನಿ ಪ್ರಜ್ಞೆ ಕಳೆದುಕೊಂಡ ತತ್ ಕ್ಷಣವೇ ಸಂಸ್ಥೆಯ ವೈದ್ಯಕೀಯ ಸಿಬಂದಿ ಆಗಮಿಸಿದರು ಮತ್ತು ಆಂಬ್ಯುಲೆನ್ಸ್ ತಂಡವನ್ನು ಕರೆಯಲಾಯಿತು. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು, ಅದು ಧನಾತ್ಮಕ ಫಲಿತಾಂಶಗಳನ್ನು ನೀಡಲಿಲ್ಲ” ಎಂದು ತಿಳಿಸಿದೆ.
ಜರ್ಮನಿಯಿಂದ 2021 ರಲ್ಲಿ ರಷ್ಯಾಕ್ಕೆ ಸ್ವಯಂಪ್ರೇರಣೆಯಿಂದ ಹಿಂದಿರುಗಿದ್ದ ನವಲ್ನಿ, ಆಗಸ್ಟ್ 2020 ರಲ್ಲಿ ಸೈಬೀರಿಯಾದಲ್ಲಿ ವಿಷ ಪ್ರಾಷನ ಮಾಡಿ ಹತ್ಯೆಗೆ ಯತ್ನ ಮಾಡಲಾಗಿದೆ ಎಂದು ಹೇಳಿದ್ದರು. ರಷ್ಯಾ ಕೊಲ್ಲಲು ಪ್ರಯತ್ನಿಸುವುದನ್ನು ನಿರಾಕರಿಸಿ, ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿತ್ತು.