ಬೆಂಗಳೂರು: ಶ್ರೀಮಂತರಿಂದ ತೆರಿಗೆಯನ್ನು ಕಾನೂನು ರೀತಿ ಸಂಗ್ರಹಿಸಿ, ಬಡವರಿಗೆ ಆರ್ಥಿಕ , ಸಾಮಾಜಿಕ ಶಕ್ತಿ ತುಂಬುತ್ತಿರುವುದು good economics. ನಾನು good economics ನಲ್ಲಿ ನಂಬಿಕೆಯಿಟ್ಟಿರುವವನು. ಮುಂದಿನ ವರ್ಷಕ್ಕೆ ಗ್ಯಾರಂಟಗಳಿಗೆ 52,009 ಕೋಟಿ ಮೀಸಲಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡಿದರು.
15 ನೇ ಹಣಕಾಸು ಆಯೋಗ ರಾಜ್ಯಕ್ಕೆ ಒಟ್ಟಾರೆ 11495 ಕೋಟಿ ರೂ. ಶಿಫಾರಸ್ಸು ಮಾಡಿದ್ದನ್ನು ರಾಜ್ಯಕ್ಕೆ ಒತ್ತಾಯಿಸಿ ತನ್ನಿ ಎಂದು ಅಂದಿನ ಸರ್ಕಾರಕ್ಕೆ ತಿಳಿಸಿದ್ದೆ. ಕೇಂದ್ರದ ಬಜೆಟ್ 2023-24 ರಲ್ಲಿ ಭದ್ರಾ ಮೇಲ್ದಂಡೆಗೆ 5300 ಕೋಟಿ ರೂ. ನೀಡಲಾಗುವುದು ಎಂದು ಹೇಳಿ ಇದಕ್ಕೆ ಯಾವುದೇ ಷರತ್ತುಗಳನ್ನು ಆಗ ಉಲ್ಲೇಖಿಸಿರಲಿಲ್ಲ. ಈ ಬಗ್ಗೆ ಆ ಸಾಲಿನ ರಾಜ್ಯ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರೂ ಉಲ್ಲೇಖಿಸಿದ್ದಾರೆ. ಆದರೆ ಈ ವರೆಗೂ ಒಂದು ರೂಪಾಯಿ ಕೂಡ ಬಂದಿಲ್ಲ. ಹೀಗಾಗಿ ಕೇಂದ್ರದಿಂದ 5300 ಕೋಟಿ ಸಹಾಯಧನವನ್ನು ಬೊಮ್ಮಾಯಿಯವರು ಕೊಡಿಸಲಿ ಎಂದು ಸವಾಲು ಹಾಕಿದರು.
ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶೇ50 ರಷ್ಟು ತೆರಿಗೆ ಪಾಲು ರಾಜ್ಯಕ್ಕೆ ವಾಪಾಸ್ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ಈಗ ನಾವು ಕಟ್ಟುವ ಪ್ರತಿ ನೂರು ರೂಗೆ 12-13 ರೂ ಮಾತ್ರ ವಾಪಾಸ್ ಬರುತ್ತಿದೆ. ಈ ಅನ್ಯಾಯಗಳ ಬಗ್ಗೆ ಸಂಸದರು ಬಾಯಿಯನ್ನೇ ಬಿಡುವುದಿಲ್ಲ. ಘಡ ಘಡ ನಡುಗುತ್ತಾರೆ ಎಂದು ವ್ಯಂಗ್ಯವಾಡಿದರು.