ರಾಮನಗರ (ಸೆ.27): ರಾಮನಗರ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಂಘದ ಚುನಾವಣೆಗೆ ಕಾರಿನಲ್ಲಿ ತೆರಳುತ್ತಿದ್ದ ಸಿಬ್ಬಂದಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ವೋಟಿಂಗ್‌ಗೆ ಬಳಸುವ ಎಲ್ಲ ಪರಿಕರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಚುನಾವಣೆಗೆ ತೆರಳುತ್ತಿದ್ದ ಚುನಾವಣಾ ಅಧಿಕಾರಿಗಳ ಕಾರನ್ನು ಅಡ್ಡಗಟ್ಟಿ ಅವರ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಚುನಾವಣಾ ಪರಿಕರಗಳನ್ನು ದೋಚಿ ಪರಾರಿ ಆಗಿದ್ದಾರೆ. ಈ ಘಟನೆಯು ಮಾಗಡಿ ಕುಣಿಗಲ್ ರಸ್ತೆಯಲ್ಲಿ ನಡೆದಿದೆ. ಬುಲೇರೊ ವಾಹನದಲ್ಲಿ ತೆರಳುತ್ತಿದ್ದ 5 ಜನ ಚುನಾವಣಾ ಸಿಬ್ಬಂದಿಯನ್ನು ಸ್ಯಾಂಟ್ರೋ ಕಾರಿನಲ್ಲಿ ಬಂದ 5 ಜನರ ತಂಡವು ಅಡ್ಡಗಟ್ಟಿದೆ. ನಂತರ, ನೀವು ಯಾರೆಂದು ಕೇಳಿದಾಗ ಚುನಾವಣಾ ಸಿಬ್ಬಂದಿಯು ಗುರುತಿನ ಚೀಟಿಯನ್ನು ತೋರಿಸಿ ಅಡ್ಡಗಟ್ಟಿರುವುದನ್ನು ಬಿಡುವಂತೆ ತಿಳಿಸಿದ್ದಾರೆ.
ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ ತಡೆಯುವ ಉದ್ದೇಶಕ್ಕೆಂದಲೇ ಬಂದಿರುವಂತೆ ಕಾಣಿಸುತ್ತಿದ್ದ ದುಷ್ಕರ್ಮಿಗಳು ಚುನಾವಣಾ ಸಿಬ್ಬಂದಿ ಇವರೇ ಎಂಬುದು ಖಚಿತವಾಗುತ್ತಿದ್ದಂತೆ ಅವರ ಬಳಿಯೊದ್ದ ಎಲ್ಲ ಚುನಾವಣಾ ಸಂಬಂಧಿತ ಪರಿಕರಗಳನ್ನು ಕಿತ್ತುಕೊಂಡು ಪರಾರಿ ಆಗಿದ್ದಾರೆ. ಈ ವೇಳೆ ಐದು ಜನರಲ್ಲಿ ಇಬ್ಬರು ಕಾರನ್ನು ಇಳಿದು ದರೋಡೆ ಮಾಡಿದ್ದಾರೆ. ಆಗ ಪರಿಕರಗಳನ್ನು ಕಿತ್ತುಕೊಳ್ಳಲು ಮುಂದಾದ ದುಷ್ಕರ್ಮಿಗಳನ್ನು ತಡೆಯಲು ಬಂದವರಿಗೆ ಹಲ್ಲೆ ಮಾಡಿದ್ದಾರೆ. ನಂತರ, ಸ್ಯಾಂಟ್ರೋ ಕಾರಿನಲ್ಲಿ ಹತ್ತಿಕೊಂಡು ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಅದರಲ್ಲಿ ಚುನಾವಣಾ ಸಿಬ್ಬಂದಿಯೊಬ್ಬರು ದುಷ್ಕರ್ಮಿಗಳು ಹಲ್ಲೆ ಮಾಡುವ ದೃಶ್ಯ ಹಾಗೂ ಆರೋಪಿಗಳ ಕಾರು ಆಕ್ಸಿಡೆಂಟ್ ಮಾಡಲು ಮುಂದಾದ ದೃಶ್ಯವನ್ನು ವೀಡಿಯೋ ಮಾಡಿದ್ದಾರೆ.