ವಿಜಯಪುರ: ಬೈಕ್, ಮನೆ ಹಾಗೂ ಫೈನಾನ್ಸ್ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿರುವ ವಿಜಯಪುರ ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಬೈಕ್, ಚಿನ್ನಾಭರಣಗಳನ್ನು ಜಪ್ತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಹಲವಾರು ದಿನಗಳಿಂದ ನಡೆಯುತ್ತಿದ್ದ ಫೈನಾನ್ಸ್, ಬೈಕ್ ಕಳ್ಳತನವನ್ನು ಗಂಭೀರವಾಗಿ ಪರಿಗಣಿಸಿದ್ದ ಇಲಾಖೆ ಹಲವಾರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸಿಂದಗಿ ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ 16.65 ಲಕ್ಷ ರೂ. ಮೌಲ್ಯದ 37 ಬೈಕ್‌ಗಳನ್ನು ಜಪ್ತು ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವನೆ, ಜಿಲ್ಲೆಯ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಲಬುರ್ಗಿ ಜಿಲ್ಲೆಯ ಸುರಪುರ ಗ್ರಾಮದ ಬಸವರಾಜ ಭೀಮಣ್ಣ ಹುಣಸಿಗಿಡದ, ಹುಲಗಪ್ಪ ಮರೆಪ್ಪ ಕೂಕಲೋರ, ಕೊಂಡಯ್ಯ ಭೀಮರಾಯ ಪಾರ್ವತಿದೊಡ್ಡಿ, ರವಿಕುಮಾರ ದೇವಿಂದ್ರಪ್ಪ ಪಾರ್ವತಿದೊಡ್ಡಿ ಎಂದು ಗುರುತಿಸಲಾಗಿದೆ ಎಂದರು.
ಸಿಂದಗಿ, ಯಡ್ರಾಮಿ, ಕೋಡೆಕಲ್, ಕೆಂಭಾವಿ, ನೆಲೋಗಿ, ಗೋಗಿ, ಜೇವರ್ಗಿ, ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣದಲ್ಲಿ ಈ ಆರೋಪಿಗಳೇ ಭಾಗಿಯಾಗಿರುವ ಬಗ್ಗೆ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ, ಮೋಟಾರ್ ಸೈಕಲ್‌ಗಳ ಹ್ಯಾಂಡಲ್ ಲಾಕ್ ಮುರಿದು ಡೈರೆಕ್ಟ್ ಮಾಡಿ ಕಳ್ಳತನ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ ಎಂದು ಎಸ್.ಪಿ. ಋಷಿಕೇಶ ವಿವರಿಸಿದರು.
ಸಿಂದಗಿ ಸಮೀಪದ ಯಂಕಂಚಿ ಬೈಪಾಸ್ ಬಳಿ ಈ ತಂಡ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದನ್ನು ಕಂಡು ಪೊಲೀಸ್ ತನಿಖಾ ತಂಡ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಂದಿದೆ ಎಂದು ವಿವರಿಸಿದರು.
ಇಂಡಿ ಡಿವೈಎಸ್‌ಪಿ ಎಚ್.ಎಸ್. ಜಗದೀಶ, ಪೊಲೀಸ್ ಅಧಿಕಾರಿಗಳಾದ ನಾನಾಗೌಡ ಪೊಲೀಸಪಾಟೀಲ, ಭೀಮಪ್ಪ ರಬಕವಿ ಸೇರಿದಂತೆ ಹಲವಾರು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಬ್ಯಾಂಕ್-ಫೈನಾನ್ಸ್ ಕಳ್ಳತನ ಆರೋಪಿಗಳ ಬಂಧನ:
ಸಿಂದಗಿ ಪಟ್ಟಣ ಪಿಕೆಪಿಎಸ್ ಬ್ಯಾಂಕ್ ಹಾಗೂ ಎಲ್.ಟಿ. ಫೈನಾನ್ಸ್ ಕಳ್ಳತನ ಯತ್ನ ಸೇರಿದಂತೆ ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪ್ರಭು ಹಲಗಿ, ಅನೀಲ ನಾಯ್ಕೋಡಿ, ಬಸವರಾಜ ಮಾದರ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2.2 ಲಕ್ಷ ರೂ. ನಗದು, ಒಂದು ಕಾರು ಜಪ್ತಿ ಮಾಡಿಕೊಳ್ಳಲಾಗಿದೆ.
ಮನೆ ಕಳ್ಳತನ ಆರೋಪಿಗಳ ಬಂಧನ : 42.30 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ:
ವಿಜಯಪುರ ನಗರದ ವಿವಿಧ ಕಡೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರವಿ ಬಸವರಾಜ ಬಾಕಲಿ ಹಾಗೂ ರಾಜು ಶಿವಾನಂದ ಹೊಸಮನಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 666 ಗ್ರಾಂ ಚಿನ್ನಾಭರಣ, 190 ಗ್ರಾಂ ಬೆಳ್ಳಿಯ ಆಭರಣ, 21 ಸಾವಿರ ರೂ. ನಗದು ಸೇರಿದಂತೆ 42.30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ. ಆದರ್ಶ ನಗರ, ಜಲನಗರ, ಗೋಳಗುಮ್ಮಟ ಸೇರಿದಂತೆ 9 ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವ ಬಗ್ಗೆ ತಿಳಿದು ಬಂದಿದೆ ಎಂದು ಎಸ್.ಪಿ. ತಿಳಿಸಿದರು.
ಪದೇ ಪದೇ ಮನೆಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಗಟ್ಟಿ ಕಳ್ಳರನ್ನು ಹೆಡೆಮುರಿಕಟ್ಟಲು ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿತ್ತು. ಈ ತನಿಖಾ ತಂಡ ಸಾಂಗ್ಲಿ, ಸೊಲಾಪೂರ, ಬೆಳಗಾವಿ ಮೊದಲಾದ ಕಡೆಗಳಲ್ಲಿ ಆರೋಪಿಗಳ ತಪಾಸಣೆಯಲ್ಲಿದ್ದ ಸಂದರ್ಭದಲ್ಲಿ ಸೊಲಾಪೂರ ನಾಕಾ ಬಳಿ ಪ್ರಥಮ ಆರೋಪಿ ರವಿಯನ್ನು ಬಂಧಿಸಲಾಗಿದೆ, ನಂತರ ಅವನಿಗೆ ವಿಚಾರಣೆ ನಡೆಸಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ಡಿವೈಎಸ್‌ಪಿ ಬಸವರಾಜ ಯಲಿಗಾರ, ಪೊಲೀಸ್ ಅಧಿಕಾರಿಗಳಾದ ಮಲ್ಲಯ್ಯ ಮಠಪತಿ, ಜ್ಯೋತಿ ವಾಲೀಕಾರ, ಸುರೇಶ ಮಂಟೂರ, ಪಿ.ಆರ್. ಹಿಪ್ಪರಗಿ, ಸಿಬ್ಬಂದಿಗಳಾದ ವೈ.ಪಿ. ಕಬಾಡೆ,ಎಂ.ಎ. ಜಾಧವ, ಎಸ್.ಎ. ಬನಪಟ್ಟಿ, ಮಹೇಶ ಸಾಲಿಕೇರಿ, ಜೆ.ಎಸ್. ವನಜಂಕರ, ಶ್ರೀಶೈಲ ಗಾಯನ್ನವರ, ಎಸ್.ಕೆ. ಕಲಾದಗಿ, ಸಂಜು ಬಿರಾದಾರ, ಮಹೇಶ ಸಾಲಿಕೇರಿ, ಸಚೀನ್, ನಂದೇಶ, ಗುಂಡು ಗಿರಣಿವಡ್ಡರ, ಮೊಹ್ಮದ್ ಬಾಗವಾನ, ಜಬ್ಬಾರ ಇಲಕಲ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್.ಪಿ. ಋಷಿಕೇಶ ಶ್ಲಾಘಿಸಿದರು.
ಎಎಸ್‌ಪಿ ಶಂಕರ ಮಾರಿಹಾಳ, ಅಪರಾಧ ವಿಭಾಗದ ಎಎಸ್‌ಪಿ ರಾಮನಗೌಡ ಹಟ್ಟಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.