Crime

ಬೀದರ್: ನಾಳೆ ಮತ ಎಣಿಕೆ, ತಾಲೂಕುವಾರು ಸ್ಥಳದ ವಿವರಕ್ಕಾಗಿ ಕ್ಲಿಕ್ ಮಾಡಿ

ಬೀದರ್, ಡಿಸೆಂಬರ್ 29:- ಬೀದರ ಜಿಲ್ಲೆಯ ಐದು ತಾಲೂಕುಗಳಿಗೆ ಡಿಸೆಂಬರ್ 22ರಂದು ಮತ್ತು ಮೂರು ತಾಲೂಕುಗಳಿಗೆ ಡಿಸೆಂಬರ್ 27ರಂದು ನಡೆದ ಮತದಾನ ಮುಕ್ತಾಯವಾಗಿದೆ. ಡಿಸೆಂಬರ್ 30ರಂದು ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಅಂದು ಬೀದರ ತಾಲೂಕಿನ ಮತ ಎಣಿಕೆಯು ಬೀದರನ ಬಿ.ವ್ಹಿ.ಭೂಮರೆಡ್ಡಿ ಕಾಲೇಜಿನಲ್ಲಿ, ಔರಾದ್ ಮತ್ತು ಕಮಲನಗರ ತಾಲೂಕುಗಳ ಮತೆ ಎಣಿಕೆಯು ಔರಾದ್ ಪಟ್ಟಣದ ಶ್ರೀ ಅಮರೇಶ್ವರ ಪದವಿ ಕಾಲೇಜಿನಲ್ಲಿ, ಭಾಲ್ಕಿ ತಾಲೂಕಿನ ಮತಎಣಿಕೆಯು ಬಸವೇಶ್ವರ ಚೌಕ್ ಹತ್ತಿರದ ಸರ್ಕಾರಿ ಪ್ರೌಢಶಾಲೆಯಲ್ಲಿ, ಬಸವಕಲ್ಯಾಣ ಮತ್ತು ಹುಲಸೂರ ತಾಲೂಕುಗಳ ಮತ ಎಣಿಕೆಯು ಬಸವಕಲ್ಯಾಣದ ತೇರು ಮೈದಾನದಲ್ಲಿರುವ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ, ಹುಮನಾಬಾದ್ ಮತ್ತು ಚಿಟಗುಪ್ಪಾ ತಾಲೂಕುಗಳ ಮತ ಎಣಿಕೆಯು ಹುಮನಾಬಾದ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ನಂ.65 ಹತ್ತಿರದಲ್ಲಿರುವ ರಾಮ ಮತ್ತು ರಾಜ್ ಪಿಯು ಕಾಲೇಜಿನಲ್ಲಿ ನಡೆಯಲಿದೆ.
ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭ: ಜಿಲ್ಲೆಯ ವಿವಿಧೆಡೆ ಇರುವ ಆಯಾ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆಯು ಏಕಕಾಲಕ್ಕೆ ಬೆಳಗ್ಗೆ ಸರಿಯಾಗಿ 8 ಗಂಟೆಯಿಂದ ಆರಂಭವಾಗಿ ಮತಗಳ ಎಣಿಕೆ ಮುಕ್ತಾಯವಾಗುವವರೆಗೆ ನಡೆಯಲಿದೆ.
ಟೇಬಲ್ ವ್ಯವಸ್ಥೆ: ಬೀದರ, ಬಸವಕಲ್ಯಾಣ ಮತ್ತು ಭಾಲ್ಕಿ ತಾಲೂಕುಗಳ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗಾಗಿ ತಲಾ 15ರಂತೆ ಟೇಬಲ್ ಅಳವಡಿಸಲಾಗಿದೆ. ಚಿಟಗುಪ್ಪಾ ಮತ್ತು ಕಮಲನಗರ ತಾಲೂಕುಗಳ ಮತ ಎಣಿಕೆಗೆ ತಲಾ 6ರಂತೆ ಟೇಬಲ್ ಅಳವಡಿಸಲಾಗಿದೆ. ಹುಮನಾಬಾದ್, ಔರಾದ್ ಮತ್ತು ಹುಲಸೂರ ತಾಲೂಕುಗಳ ಮತ ಎಣಿಕೆಗೆ ಅನುಕ್ರಮವಾಗಿ 9, 7 ಮತ್ತು 2 ಟೇಬಲ್ ಅಳವಡಿಸಲಾಗಿದೆ.
ನೋಡೆಲ್ ಅಧಿಕಾರಿಗಳ ನೇಮಕ: ಜಿಲ್ಲೆಯಲ್ಲಿನ ಎಲ್ಲ ಮತ ಎಣಿಕಾ ಕೇಂದ್ರಗಳಲ್ಲಿ ಮತ ಎಣಿಕೆಯು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಮತ ಎಣಿಕೆ ಕೇಂದ್ರಕ್ಕೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಅಧಿಕಾರಿಗಳು ಮತ್ತು ಸಿಬ್ಬಂದಿ ವ್ಯವಸ್ಥೆ: ಮತ ಎಣಿಕೆಗಾಗಿ ತಲಾ ಒಂದು ಟೇಬಲ್‍ಗೆ ಒಬ್ಬ ಮೇಲ್ವಿಚಾರಕರು ಮತ್ತು ಸಿಬ್ಬಂದಿಯನ್ನು ನಿಯೋಜಿಸಿದ್ದು, ಎಂಟೂ ತಾಲೂಕುಗಳಿಗೆ ಸಂಬಂಧಿಸಿದ ಮತ ಎಣಿಕೆಗಾಗಿ 75 ಮೇಲ್ವಿಚಾರಕರು ಮತ್ತು 75 ಸಹಾಯಕ ಸಿಬ್ಬಂದಿ ಸೇರಿ ಒಟ್ಟು 150 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
2912 ಅಭ್ಯರ್ಥಿಗಳ ಆಯ್ಕೆಗಾಗಿ ಮತ ಎಣಿಕೆ: ಬೀದರ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಒಟ್ಟು 178 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, ಬೀದರ 1812, ಔರಾದ್ (ಬಿ) 831, ಕಮಲನಗರ 746, ಬಸವಕಲ್ಯಾಣ 1671, ಹುಲಸೂರ 204, ಹುಮನಾಬಾದ್ 1117 ಹಾಗೂ ಚಿಟಗುಪ್ಪಾ 787 ಮತ್ತು ಭಾಲ್ಕಿ 1507 ಸೇರಿ ಒಟ್ಟು 8675 ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಬೀದರನಲ್ಲಿ 579, ಔರಾದ್ (ಬಿ)ನಲ್ಲಿ 330, ಕಮಲನಗರದಲ್ಲಿ 263, ಬಸವಕಲ್ಯಾಣದಲ್ಲಿ 544, ಹುಲಸೂರದಲ್ಲಿ 72, ಹುಮನಾಬಾದ್‍ನಲ್ಲಿ 325 ಹಾಗೂ ಚಿಟಗುಪ್ಪಾದಲ್ಲಿ 244 ಮತ್ತು ಭಾಲ್ಕಿನಲ್ಲಿ 555 ಸೇರಿ ಒಟ್ಟು 2912 ಅಭ್ಯರ್ಥಿಗಳ ಆಯ್ಕೆಗಾಗಿ ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದೆ.
ಅವಿರೋಧ ಆಯ್ಕೆ: ಈಗಾಗಲೇ ಬೀದರನಲ್ಲಿ 36, ಔರಾದ್ (ಬಿ)ನಲ್ಲಿ 55, ಕಮಲನಗರದಲ್ಲಿ 18, ಬಸವಕಲ್ಯಾಣದಲ್ಲಿ 33, ಹುಲಸೂರದಲ್ಲಿ 05, ಹುಮನಾಬಾದ್‍ನಲ್ಲಿ 18, ಚಿಟಗುಪ್ಪಾದಲ್ಲಿ 05 ಮತ್ತು ಭಾಲ್ಕಿನಲ್ಲಿ 56 ಸೇರಿ ಒಟ್ಟು 226 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button