ಮಂಗಳೂರಿನಿಂದ ಹೊರಟ ಸರಕು ಹಡಗಿನ ಮೇಲೆ ಕ್ಷಿಪಣಿ ದಾಳಿ – ಅನಾಹುತದಿಂದ ಪಾರು

ಮಂಗಳೂರು: ಬಂದರು ನಗರಿ ಮಂಗಳೂರಿ ನಿಂದ ಶೆಲ್‌ ಕಂಪೆನಿಯ ವೈಮಾನಿಕ ಇಂಧನ (ಏರ್‌ಲೈನ್‌ ಟರ್ಬೈನ್‌ ಫ‌ುಯಲ್‌ -ಎಟಿಎಫ್-ಅಥವಾ ಏವಿ ಯೇಶನ್‌ ಪೆಟ್ರೋಲ್‌)ವನ್ನು ಹೊತ್ತು ನೆದರ್ಲೆಂಡ್‌ಗೆ ತೆರಳುತ್ತಿದ್ದ ಸರಕು ಹಡಗಿನ ಮೇಲೆ ಯೆಮೆನ್‌ ಸಮೀಪ ಕಡಲ್ಗಳ್ಳರು ಕ್ಷಿಪಣಿ ದಾಳಿ ನಡೆಸಿದ್ದಾರೆ.

ಅದೃಷ್ಟವಶಾತ್‌ ಕಡಲ್ಗಳ್ಳರ ಗುರಿ ತಪ್ಪಿದ ಪರಿಣಾಮ ಹಡಗಿಗೆ ಯಾವುದೇ ಅಪಾಯವಾಗಿಲ್ಲ. ಹಡಗು-ಸಿಬಂದಿ ಸುರಕ್ಷಿತವಾಗಿದ್ದಾರೆ ಎಂದು ಮೂಲ ಗಳು ತಿಳಿಸಿವೆ. ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಉತ್ಪಾದನೆಯಾದ ವೈಮಾನಿಕ ಇಂಧನವನ್ನು ಶೆಲ್‌ ಕಂಪೆನಿಯು ಖರೀದಿಸಿ ನೆದರ್ಲೆಂಡ್‌ಗೆ ಸಾಗಾಟ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಡಗಿಗೆ ಡಿ. 6ರಂದು ಮಂಗಳೂರಿನಲ್ಲಿ ತೈಲ ಸಂಗ್ರಹ ಮಾಡಲಾಗಿತ್ತು.

ಡಿ. 11ರಂದು ರಾತ್ರಿ ಯೆಮೆನ್‌ನ ಬಂಡುಕೋರರ ಆಡಳಿತವಿರುವ ಬಾಬ್‌ ಎಲ್‌-ಮಂಡೆಬ್‌ ಕೊಲ್ಲಿಯಲ್ಲಿ ಕ್ಷಿಪಣಿ ದಾಳಿ ನಡೆದಿದೆ.

ಎಂಆರ್‌ಪಿಎಲ್‌ನಿಂದ ಶೆಲ್‌ ಸಹಿತ ವಿವಿಧ ಕಂಪೆನಿಯವರು ತೈಲ ಖರೀದಿ ಮಾಡಿ ಸಂಬಂಧಪಟ್ಟ ಕಂಪೆನಿಯವರ ಹಡಗಿನಲ್ಲಿ ಸಾಗಾಟ ಮಾಡುತ್ತಾರೆ. ಅವರು ದೇಶ-ವಿದೇಶಗಳಿಗೆ ಮಾರುಕಟ್ಟೆ ಆಧಾರಿತವಾಗಿ ಸಾಗಾಟ ಮಾಡುತ್ತಾರೆ ಎಂದು ಎಂಆರ್‌ಪಿಎಲ್‌ ಮೂಲಗಳು ತಿಳಿಸಿವೆ.

ಮಂಗಳೂರಿನಿಂದ ವಿವಿಧ ಕಂಪೆನಿಗಳ ಸರಕು ತುಂಬಿದ ಹಡಗುಗಳು ನಿತ್ಯ ಸಂಚರಿಸುತ್ತವೆ. ಈ ಪೈಕಿ ಬಹುತೇಕ ಹಡಗುಗಳು ತಲುಪಲಿರುವ ಕೊನೆಯ ನಿಲ್ದಾಣದ ಬಗ್ಗೆ ಇಲ್ಲಿ ಮಾಹಿತಿ ಇರುವುದಿಲ್ಲ. ಯಾಕೆಂದರೆ ಆ ಹಡಗುಗಳು ವಯಾ ದೇಶ-ವಿದೇಶದ ಇತರ ಬಂದರಿಗೆ ಹೋಗಿ ಅಲ್ಲಿಂದ ಸರಕು ತುಂಬಿಸಿಕೊಂಡು ಇತರ ಕಡೆಗೆ ಹೋಗುತ್ತವೆ. ಹೀಗಾಗಿ ಯೆಮೆನ್‌ ಸಮೀಪ ಗುರಿ ತಪ್ಪಿದ ಕ್ಷಿಪಣಿ ದಾಳಿಗೆ ಒಳಗಾದ ಹಡಗಿನ ವಿವರ ನಿರೀಕ್ಷಿಸಲಾಗುತ್ತಿದೆ ಎಂದು ನವ ಮಂಗಳೂರು ಬಂದರು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಭಾರತದ ನಾಗರಿಕ ವಿಮಾನ ಯಾನ ನಿರ್ದೇಶನಾಲಯದ ನಿಯಮಾವಳಿಯ ಪ್ರಕಾರ ಎಂಆರ್‌ಪಿಎಲ್‌ನಲ್ಲಿ ವಿಮಾನಗಳಿಗೆ ಬಳಸುವ ಎಟಿಎಫ್ ಉತ್ಪಾದನೆಯಾಗುತ್ತದೆ. ದೇಶದ ವಿವಿಧ ತೈಲ ಕಂಪೆನಿಗಳಿಗೆ ಎಂಆರ್‌ಪಿಎಲ್‌ ಇದನ್ನು ಮಾರಾಟ ಮಾಡುತ್ತಿದ್ದು, ಅಲ್ಲಿಂದ ದೇಶ-ವಿದೇಶಗಳಿಗೆ ಸಾಗಾಟ ಮಾಡಲಾಗುತ್ತದೆ. ಎಂಆರ್‌ಪಿಎಲ್‌ನಲ್ಲಿ ಉತ್ಪಾದನೆಯಾಗುವ ಎಟಿಎಫ್‌ ಅನ್ನು ದೇಶೀಯವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು, ಮಧುರೈ, ಕಲ್ಲಿಕೋಟೆ, ಗೋವಾ, ಹೈದರಾಬಾದ್‌, ತಿರುಚಿರಾ ಪಳ್ಳಿ, ಕಣ್ಣೂರು, ಕೊಯಮತ್ತೂರು ಸಹಿತ ವಿವಿಧ ವಿಮಾನ ನಿಲ್ದಾಣದಲ್ಲಿ ವಿಮಾನಗಳಿಗೆ ತೈಲ ಸಂಸ್ಥೆಗಳ ಮೂಲಕ ಸರಬರಾಜು ಮಾಡಲಾಗುತ್ತದೆ.

Latest Indian news

Popular Stories