ಮಂಗಳೂರು: ಬಸ್ ಚಾಲಕನ ವಿರುದ್ಧ ಮಾತ್ರವಲ್ಲದೆ ಅಜಾಗರೂಕತೆಯಿಂದ ರಸ್ತೆ ದಾಟಿದ ಮಹಿಳೆಯ ವಿರುದ್ಧವೂ ಪ್ರಕರಣ ದಾಖಲು, ದಂಡ ವಸೂಲಿ!

ಮಂಗಳೂರು ಉಳ್ಳಾಲ ಸಮೀಪ ಖಾಸಗಿ ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದ ಅಪಘಾತದಿಂದ ಮಹಿಳೆ ಪಾರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್‌ ಚಾಲಕನ ವಿರುದ್ಧ ಮಾತ್ರವಲದ್ಲೆ ನಿರ್ಲಕ್ಷ್ಯತನದಿಂದ ರಸ್ತೆ ದಾಟಿದ ಮಹಿಳೆ ವಿರುದ್ಧವೂ ಮಂಗಳೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಿದ ಅಪರೂಪದ ಘಟನೆ ನಡೆದಿದೆ.

ಖಾಸಗಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಮಂಗಳವಾರ ಉಳ್ಳಾಲದ ಸಮೀಪದ ತೌಡುಗೋಳಿಯಲ್ಲಿ ಸಂಭವಿಸಬಹುದಾಗಿದ್ದ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು. ಎದುರಿನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಅನುಸರಿಸಿ ಅಡ್ಡಲಾಗಿ ವಾಹನ ಬರುವುದನ್ನೂ ಕೂಡ ಲೆಕ್ಕಿಸದೆ ಮುಸ್ಲಿಂ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದರು. ಇದೇ ವೇಳೆ ಬಸ್‌ ಬಂದಿದ್ದು, ಹಠಾತ್ ಬ್ರೇಕ್ ಹಾಕಿ ಬದಿಗೆ ಸರಿಸಿದ್ದರಿಂದ ಮಹಿಳೆ ಕೂದಲೆಳೆಯಲ್ಲಿ ಬಚಾವ್ ಆಗಿದ್ದರು. ಹೀಗಿದ್ದರೂ ಕೂಡ ಚಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿ ಖಾಸಗಿ ಬಸ್ ಗಳ ಧಾವಂತಕ್ಕೆ ತಕ್ಕ ಪಾಠ ಕಲಿಸಲು ಖಾಕಿ ಪಡೆ ಮುಂದಾಗಿದ್ದರು. ಈ ಘಟನೆಯಲ್ಲಿ ನಿರ್ಲಕ್ಷ್ಯ, ಅತೀ ವೇಗದ ಚಾಲನೆ ಆರೋಪದಲ್ಲಿ ಬಸ್‌ ಚಾಲಕನ ವಿರುದ್ಧ ಐಪಿಸಿ 279, 336 ಜತೆಗೆ ರೂಲ್‌ 211(2)ಆರ್‌/ಡಬ್ಲೂತ್ರ್ಯ 177 ಮೋಟಾರು ವಾಹನ ಕಾಯಿದ 198ರಂತೆ ಕೇಸು ದಾಖಲಿಸಲಾಗಿತ್ತು.

ಇದರ ನಡುವೆ ಎದುರಿನಲ್ಲಿ ಬಸ್ ಬರುತ್ತಿದ್ದರೂ ಕೂಡ ಮಹಿಳೆ ನಿರ್ಲಕ್ಷ್ಯತನದಿಂದ ರಸ್ತೆ ದಾಟಿದ್ದು ರಸ್ತೆಯಲ್ಲಿ ಬರುವ ವಾಹನಗಳನ್ನು ಗಮನಿಸದೇ ಮಹಿಳೆ ರಸ್ತೆ ದಾಟಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗಾಗಿ, ಪೊಲೀಸರು ಮಹಿಳೆಗೂ ಕೂಡ ದಂಡ ವಿಧಿಸಿದ್ದಾರೆ. ಕರ್ನಾಟಕ ಸಂಚಾರ ನಿಯಂತ್ರಣ ನಿಯಮಗಳು 1979ರಡಿ ಮಂಗಳೂರಿನ ಸಂಚಾರಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ಟ್ರಾಫಿಕ್‌ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಟ್ವೀಟರ್‌ನಲ್ಲಿ ಸೆಕ್ಷನ್ 13ರ ಸಂಚಾರ ನಿಯಂತ್ರಣ ನಿಯಮಗಳು ಹಾಗೂ ಸೆಕ್ಷನ್ 92ಜಿ ಕೆಪಿ ಕಾಯಿದೆಯಡಿ ಕೇಸು ದಾಖಲಿಸಲು ಅವಕಾಶವಿರುವ ಬಗ್ಗೆ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದರು. ಈ ನಿಟ್ಟಿನಲ್ಲಿ ಕರ್ನಾಟಕ ಸಂಚಾರ ನಿಯಂತ್ರಣ ನಿಯಮಗಳು 1979ರಡಿ ಕೇಸು ದಾಖಲಿಸಿದ ಬಗ್ಗೆ ನಗರ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಜೈನ್‌ ಮಾಹಿತಿ ನೀಡಿದ್ದಾರೆ.

Latest Indian news

Popular Stories