ಮೊಂಟೆಪದವು ಶಾಲೆಯಲ್ಲಿ ನಡೆದ ಘಟನೆ: ಮಕ್ಕಳಲ್ಲಿ ಬೆಳೆಯುತ್ತಿರುವ ಹಿಂಸಾ ಪ್ರವೃತ್ತಿ ತಡೆಗೆ ಸೂಕ್ತ ಕಾರ್ಯಕ್ರಮ ರೂಪಿಸಲು ಎಸ್.ಐ.ಓ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ಮೊಂಟೆಪದವು ಪ್ರೌಢಶಾಲೆಯಲ್ಲಿ ಚೂರಿ ಇರಿತ ಘಟನೆ ಇದೀಗ ಬಹಳಷ್ಟು ಆತಂಕ ಹುಟ್ಟು ಹಾಕಿದೆ.
ಒಂಭತ್ತನೇ ಕ್ಲಾಸಿನ ಮಕ್ಕಳು ಆಯುಧಧಾರಿಗಳಾಗಿ ಶಾಲೆಗೆ ಬಂದು ಸಹಪಾಠಿಗೆ ಚೂರಿ ಇರಿತ ಮಾಡುವುದಾದರೆ ಇಂದಿನ ಮಕ್ಕಳ ನಡವಳಿಕೆಯ ಮೇಲೆ ಗಮನ ಹರಿಸಬೇಕಾಗಿದೆ.ಇಂತಹ ವಿದ್ಯಾರ್ಥಿಗಳಿಗೆ ಭೀಭತ್ಸ ಕಾರ್ಯ ಮಾಡಲು ಪ್ರೇರಣೆ ನೀಡಿದುದಾರೂ ಏನು? ಎಂಬುವುದನ್ನು ಪತ್ತೆ ಹಚ್ಚಿ ಮಕ್ಕಳಲ್ಲಿ ಬೆಳೆಯುತ್ತಿರುವ ಹಿಂಸಾ ಪ್ರವೃತ್ತಿಯನ್ನು ತಡೆಯಲು ಕಾರ್ಯಕ್ರಮ ರೂಪಿಸಲು ಎಸ್.ಐ.ಓ ದಕ್ಷಿಣ ಕನ್ನಡ ಜಿಲ್ಲೆಯ ನಿಯೋಗವು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಮನವಿಯಲ್ಲಿ ಇಂತಹ ಹಿಂಸಾ ಪ್ರವೃತ್ತಿ ತಡೆಗಟ್ಟಲು ಮಕ್ಕಳಲ್ಲಿ ಒಳ್ಳೆಯದು ಮತ್ತು ಕೆಟ್ಟದು ಯಾವುದು ಎಂಬ ವಿಚಾರದ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಅದರೊಂದಿಗೆ ಆಧುನಿಕ ಜಗತ್ತಿನಲ್ಲಿ ಹಿಂಸಾ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವ ಮಕ್ಕಳನ್ನು ಸುಧಾರಿಸಲು ಶಾಲೆಗಳಲ್ಲಿ ಸಮಾಲೋಚಕರನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿರುವುದಾಗಿ ಎಸ್.ಐ.ಓ ದಕ್ಷಿಣ ಕನ್ನಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Latest Indian news

Popular Stories