ಉರ್ದು ಅಕಾಡೆಮಿಗೆ “ಒಂದು ಲಕ್ಷ” ಅನುದಾನ: ಮುಸ್ಲಿಂ ವಿದ್ವಾಂಸರ ಅಸಮಾಧಾನ

ಬೆಂಗಳೂರು: ಉರ್ದು ಅಕಾಡೆಮಿ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ನಿರ್ವಹಣೆಗೆ ಬಜೆಟ್‌ನಲ್ಲಿ ಕೇವಲ 1 ಲಕ್ಷ ರೂಪಾಯಿ ಮೀಸಲಿಟ್ಟಿದ್ದಕ್ಕೆ ಮುಸ್ಲಿಂ ವಿದ್ವಾಂಸರು ಅಸಮಾಧಾನಗೊಂಡಿದ್ದಾರೆ.

ಉರ್ದು ಅಕಾಡೆಮಿ ಅಧ್ಯಕ್ಷರ ಹುದ್ದೆಯನ್ನು ಎರಡು ವರ್ಷಗಳ ಕಾಲ ಸರ್ಕಾರ ಖಾಲಿ ಇರಿಸಿಕೊಂಡಿರುವುದಕ್ಕೆ ಮಾಜಿ ಪ್ರಧಾನಿ ವಿಪಿ ಸಿಂಗ್ ಅವರ ಮಾಜಿ ರಾಜಕೀಯ ಸಲಹೆಗಾರ ಸೈಯದ್ ಅಶ್ರಫ್ ಮತ್ತು ಇತರ ವಿದ್ವಾಂಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಶ್ರಫ್ ಪ್ರಕಾರ, 1 ಲಕ್ಷ ರೂಪಾಯಿಯನ್ನು 365 ದಿನಗಳಿಂದ ಭಾಗಿಸಿದರೆ, ನಂತರ ದಿನಕ್ಕೆ ಖರ್ಚು ಕೇವಲ 274 ರೂ ಉಳಿಯುತ್ತದೆ. ಉರ್ದು ಅಕಾಡೆಮಿ ಮತ್ತು ಉರ್ದು ವಿದ್ವಾಂಸರಿಗೆ ಸರ್ಕಾರ ನೀಡುವ ಗೌರವ ಇದೇ ಏನು ಎಂದು ಅವರು ಪ್ರಶ್ನಿಸಿದ್ದಾರೆ. ಉರ್ದು ಅಕಾಡೆಮಿ ಈ ಅಲ್ಪ ಮೊತ್ತದಲ್ಲಿ ಯಾವುದೇ ಪುಸ್ತಕ ಅಥವಾ ಸಾಹಿತ್ಯವನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ. 

ಅಲ್ಲದೆ ಸಮುದಾಯದ ಪರವಾಗಿ ಮಾತನಾಡಲು ಮತ್ತು ಮೊತ್ತವನ್ನು ಹೆಚ್ಚಿಸಲು ವಿಫಲವಾದ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್ ವಿರುದ್ಧ ಅಶ್ರಫ್ ಕಟುವಾದ ವಾಗ್ದಾಳಿ ನಡೆಸಿದ್ದು, ಈ ಹಿಂದೆ ಬಿಜೆಪಿ ಸರ್ಕಾರದ ವೇಳೆ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು 1 ಲಕ್ಷ ರೂ.ಗಳನ್ನು ಘೋಷಿಸಿದ್ದರು, ಆದರೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಅದನ್ನೇ ಮುಂದುವರೆಸಿದೆ. ಕಾಂಗ್ರೆಸ್ ಗೆ ಮುಸ್ಲಿಂ ಮತ ಬ್ಯಾಂಕ್ ಮಾತ್ರ ಮುಖ್ಯ. ಉರ್ದು ಮುಸ್ಲಿಮರೊಂದಿಗೆ ಮಾತ್ರ ಸಂಬಂಧ ಹೊಂದಿದೆ. ಕರ್ನಾಟಕ ಸರ್ಕಾರ ಇಷ್ಟು ಕಡಿಮೆ ಹಣ ಮಂಜೂರು ಮಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ’ ಎಂದು ಅಶ್ರಫ್ ಹೇಳಿದ್ದಾರೆ.

ಜಮೀರ್ ಖಾನ್ ಉರ್ದುವಿನಲ್ಲಿ ಸರ್ಟಿಫಿಕೇಟ್ ಪಡೆದಿದ್ದರು, ಆದರೆ ಅವರು ಪಂಡಿತರಾಗಿದ್ದರೆ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದರು. ಒಂದು ಅಥವಾ ಎರಡು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಮನವಿ ಪತ್ರ ನೀಡಲಾಗುವುದು ಮತ್ತು ಪ್ರತಿಯನ್ನು ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯೊಂದಿಗೂ ರವಾನೆ ಮಾಡಲಾಗುವುದು ಎಂದು ಅಶ್ರಫ್ ಒತ್ತಿ ಹೇಳಿದರು. ಹೋರಾಟಗಾರ ಹಾಗೂ ವಿದ್ವಾಂಸ ಆಲಂ ಪಾಷಾ ಮಾತನಾಡಿ, ಸಮುದಾಯದ ಮುಖಂಡರು ಮತ ಪಡೆಯಲು ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಅಗತ್ಯವಿದ್ದಾಗ ಸಮುದಾಯದೊಂದಿಗೆ ನಿಲ್ಲುವುದಿಲ್ಲ ಎಂದು ಕಿಡಿಕಾರಿದ್ದಾರೆ.

Latest Indian news

Popular Stories