ಲೋಕಸಭೆ ಚುನಾವಣೆ: ರಾಜ್ಯದಲ್ಲಿ 2ನೇ ಹಂತದ ಬಹಿರಂಗ ಪ್ರಚಾರ ಅಂತ್ಯ; ಸದ್ದು ಮಾಡಿದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ

ಬೆಂಗಳೂರು: ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಭಾನುವಾರ ಅಂತ್ಯಗೊಂಡಿದ್ದು, ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಭಾರಿ ಸದ್ದು ಮಾಡಿದ್ದು, ಮತದಾರನ ಮೇಲೆ ಸಣ್ಣ ಪ್ರಮಾಣದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ.

2019 ರ ಚುನಾವಣೆಯಲ್ಲಿ ಈ ಎಲ್ಲಾ 14 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಮಂಗಳವಾರದ ಚುನಾವಣೆ(ಮೇ 7) ಹೆಚ್ಚು ಮಹತ್ವದ್ದಾಗಿದೆ.

ಕರ್ನಾಟಕ ಒಟ್ಟು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಏಪ್ರಿಲ್ 26 ರಂದು 14 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದಿತ್ತು.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋವನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ‘ಮಾಸ್ ಅತ್ಯಾಚಾರಿ’ ಪರವಾಗಿ ಮತ ಕೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್, ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದು, ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದೆ.

ಏಪ್ರಿಲ್ 26 ರಂದು ಚುನಾವಣೆ ನಡೆದ ಹಾಸನ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜೆಡಿಎಸ್‌, ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿತ್ತು.

ಬಿಜೆಪಿ, ಮಾರ್ಚ್ 1 ರಂದು ಬೆಂಗಳೂರಿನ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ, ಏಪ್ರಿಲ್ 18 ರಂದು ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್‌ನಲ್ಲಿ 23 ವರ್ಷದ ನೇಹಾ ಹಿರೇಮಠ್ ಹತ್ಯೆ ಪ್ರಕರಣ, ಪಾಕಿಸ್ತಾನ ಪರ ಘೋಷಣೆ ಪ್ರಕರಣಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಜಿಲ್ಲಾ ಕೇಂದ್ರವಾದ ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲ ಹಂತದಲ್ಲಿ ಎಂಟರಿಂದ ಒಂಬತ್ತು ಸ್ಥಾನ ಗೆಲ್ಲುತ್ತೇವೆ, ಎರಡನೇ ಹಂತದಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

Latest Indian news

Popular Stories