ಕಾಂಗ್ರೆಸ್ ಸೋಲಿನ ಹಿಂದಿದೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದ ನಾಯಕತ್ವ!

? ವೈ.ಎನ್.ಕೆ

ಪಂಚರಾಜ್ಯ ಚುನಾವಣಾ ‌ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಪಾಠ ಕಲಿಸಿ ಹೋಗಿದೆ. ಇನ್ನು ಕಾಂಗ್ರೆಸ್ ಬಳಿ ಉಳಿದಿರುವ ಏಕೈಕ ದಾರಿಯೆಂದರೆ ತಾವು ನಂಬಿರುವ ಜಾತ್ಯತೀತ ಸೈದ್ಧಾಂತಿಕತೆಯನ್ನು ಸ್ಪಷ್ಟತೆಯೊಂದಿಗೆ ಜನರ ಮುಂದಿಟ್ಟು ಸಮರ್ಥ ನಾಯಕತ್ವವನ್ನು ಸಿದ್ಧಗೊಳಿಸುವುದು. ಪ್ರಸ್ತುತ ಕಾಂಗ್ರೆಸ್ ಹಲ್ಲಿಲ್ಲದ ಹುಲಿ. ಹಳೆಯ ತಂತ್ರಗಾರಿಕೆ ಬಿಟ್ಟರೆ ವಿಚಾರಧಾರೆಗಳು ಮಣ್ಣು ಸೇರಿದೆ. ಈ ಕಾರಣಕ್ಕಾಗಿಯೇ ಬಿಜೆಪಿಯೆದುರು ಮತ್ತೆ ಮತ್ತೆ ಕಾಂಗ್ರೆಸ್ ನೆಲಕಚ್ಚುತ್ತಿದೆ.

ಪಂಜಾಬಿನಲ್ಲಿ ಅವಕಾಶವಿದ್ದರೂ ಸ್ವತಃ ನಾಯಕರ ಕಚ್ಚಾಟದಿಂದಾಗಿ ತನ್ನ ಕಾಲಿಗೆ ತಾನೇ ಕಾಂಗ್ರೆಸ್ ಕೊಡಲಿಯೇಟು ನೀಡಿಕೊಂಡಿತು. ಸ್ವಾರ್ಥ ನಾಯಕತ್ವದಿಂದಾಗಿ ಕಾಂಗ್ರೆಸ್ ತಳಮಟ್ಟದ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದೆ. ಆರ್.ಎಸ್.ಎಸ್ ನಂತಹ ವ್ಯವಸ್ಥಿತ ಸಂಘಟನೆಯ ಪ್ರಬಲ ಕಾರ್ಯಕರ್ತರ ಬಲ ಬಿಜೆಪಿಗೆ ಇದೆ. ಆದರೆ ಕಾಂಗ್ರೆಸ್’ನಲ್ಲಿ ಅಂತಹ ಯಾವುದೇ ವ್ಯವಸ್ಥೆ ಕೂಡ ಪ್ರಸ್ತುತ ಅಸ್ತಿತ್ವದಲ್ಲಿ ಇಲ್ಲ ಎನ್ನ ಬಹುದು. ಗ್ರಾಮೀಣ ಮಟ್ಟದ ಜನರನ್ನು ತಲುಪಿ ಅವರನ್ನೊಳಗೊಳ್ಳುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಸೋತಿದೆ. ಆದರೆ ಸಂಘಪರಿವಾರ ತನ್ನ ಕಾರ್ಯಕರ್ತರ ಪ್ರಬಲವಾದ ನೆಟ್ವರ್ಕ್ ಬಳಸಿ ಸ್ಥಳೀಯ ಜನರನ್ನು ಹಿಡಿದಿಟ್ಟುಕೊಂಡು ಅದನ್ನು ಬಿಜೆಪಿಯ ಮತವನ್ನಾಗಿ ಬದಲಾಯಿಸುವಲ್ಲಿ ಯಶಸ್ವಿಯಾಗುತ್ತಿದೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವದ ಕುರಿತೇ ಅಸಮಾಧಾನಗಳಿವೆ. ಇನ್ನು ಪ್ರತಿರಾಜ್ಯದಲ್ಲೂ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಪರಸ್ಪರ ಕಚ್ಚಾಟ, ಅಧಿಕಾರದ ದಾಹ ಕಾಂಗ್ರೆಸ್’ನ್ನು ಮುಳುಗಿಸುತ್ತಿದೆ. ರಾಜ್ಯ ನಾಯಕರಿಗೆ ಅಧಿಕಾರ ಬರುವ ಮುನ್ನವೇ ಖುರ್ಚಿಯ ಮೇಲೆ ದುರಾಸೆ. ಹಾಗಾಗಿ ಕಚ್ಚಾಟ ಚುನಾವಣೆಯ ಮುನ್ನವೇ ಆರಂಭವಾಗುತ್ತದೆ. ಈ ಕಾರಣಕ್ಕಾಗಿ ಪುರಾತನ ಪಕ್ಷ ಜನರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದೆ. ಇನ್ನು ಅತೀ ಮುಖ್ಯವಾಗಿ ಜಿಲ್ಲಾ ಮಟ್ಟದ ನಾಯಕರಲ್ಲಿ ಸಮನ್ವಯತೆ ಇಲ್ಲ. ಕಾರ್ಯಕರ್ತರ ಮೇಲೆ ಹಿಡಿತವಿಲ್ಲ. ಸೈದ್ದಾಂತಿಕವಾಗಿ ತರಬೇತಿಗೊಳಿಸುವ, ತಮ್ಮ ವಿಚಾರಗಳನ್ನು ಯಾವುದೇ ಅಂಜಿಕೆಯಿಲ್ಲದೆ ಪ್ರಸ್ತುತ ಪಡಿಸುವ ಯಾವುದೇ ವ್ಯವಸ್ಥೆ ಇಲ್ಲದೆ ನಿರಾಯಾಸವಾಗಿ ಕಾಂಗ್ರೆಸ್ ಎಲ್ಲವನ್ನು ಕಳೆದುಕೊಳ್ಳುತ್ತದೆ.

ಗಾಂಧಿ ಕುಟುಂಬ ಈಗಾಲಾದರೂ ಎಚ್ಚೆತ್ತು ಬಿಜೆಪಿಗೆ ಪ್ರಬಲ ಹೋರಾಟ ನೀಡಲು ಗಾಂಧಿಯೇತರ ಸಮರ್ಥ ನಾಯಕತ್ವ ನೀಡಬೇಕಾಗಿರುವುದು ಅನಿವಾರ್ಯ. ಮೃದು ಹಿಂದುತ್ವದ ಧೋರಣೆ ಕೈಬಿಟ್ಟು ಸಂವಿಧಾನದ ಪ್ರತಿಪಾದನೆಯನ್ನು ಯಾವುದೇ ರಾಜಿಯಿಲ್ಲದೆ ಜನರ ಮುಂದಿಡಬೇಕು. ಜನರು ಹಿಂದುತ್ವದಕ್ಕಾಗಿ ಆಯ್ಕೆ ಮಾಡುವುದಾದರೆ ಅವರಿಗೆ ಬಿಜೆಪಿ ಇದೆ. ಅವರು ನಿಮ್ಮ ಮೃದು ಹಿಂದುತ್ವವನ್ನು ಯಾಕೆ ಆಯ್ಕೆ ಮಾಡಬೇಕು. ಈ ಕೆಲಸಕ್ಕೆ ಬಾರದ ತಂತ್ರಗಾರಿಕೆ ಬಿಟ್ಟು ಅತ್ಯಂತ ಪ್ರಬಲವಾದ ಜಾತ್ಯಾತೀತ ಪ್ರತಿಪಾದನೆಯೊಂದಿಗೆ ಮುನ್ನುಗಿದರೆ ಮಾತ್ರ ಬಿಜೆಪಿಯನ್ನು ಮುಂದಿನ ದಿನಗಳಲ್ಲಿ ಸೋಲಿಸಲು ಸಾಧ್ಯ. ಇಲ್ಲದಿದ್ದರೆ ಬಿಜೆಪಿ ಖಂಡಿತ ಸೋಲುತ್ತದೆ ಆದರೆ ಸೋಲಿಸುವ ಪಕ್ಷ ಮಾತ್ರ ಕಾಂಗ್ರೆಸ್ ಆಗಿರುವುದಿಲ್ಲ!.

Latest Indian news

Popular Stories