ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ: ಮೂವರು ಕಾನ್’ಸ್ಟೇಬಲ್ ಅಮಾನತು!

ಯಾದಗಿರಿ: ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆ ವೇಳೆ ಕರ್ತವ್ಯ ಲೋಪ ಎಸಗಿದ ಆರೋಪದ‌ಡಿ ಮೂವರು ಪೊಲೀಸ್ ಪೇದೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇ‌ದಮೂರ್ತಿ ಅವರು ಗುರುವಾರ ಅಮಾನತುಗೊಳಿಸಿದ್ದಾರೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ವಿರೇಶ್, ಸಂತೋಷ ಮತ್ತು ಮೆಹಬೂಬ್ ಅಮಾನತುಗೊಂಡ ಪೇದೆಗಳು.

ಬುಧವಾರ ಯಾದಗಿರಿ ತಾಲೂಕಿನ ಯರಗೋಳ್ ಬಳಿ ಏರ್ಪಡಿಸಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಹೆಚ್ಚು ಜನ ಒಗ್ಗೂಡದಂತೆ ಬಿಗಿ ಬಂದೋಬಸ್ತ್‌ಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ,‌ ನಿಯೋಜಿತಗೊಂಡಿದ್ದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ತಡೆದಿಲ್ಲ. ಅಲ್ಲದೇ, ಬಂದೂಕುಗಳನ್ನು ಸಹ ಜಪ್ತಿ ಮಾಡಿಕೊಂಡಿರಲಿಲ್ಲ. ಅವರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಈ ಮೂವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಯಾದಗಿರಿ ನಗರದಲ್ಲಿ ನಡೆದಿದ್ದ ಬೈಕ್ ರ್ಯಾಲಿಗೆ ಯಾವುದೇ ಅನುಮತಿ ನೀಡಿರಲಿಲ್ಲ. ಹೀಗಾಗಿ ಕಾರ್ಯಕ್ರಮ ಅಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕರ್ತವ್ಯಲೋಪದಡಿ ಮೂವರು ಪೇದೆಗಳನ್ನು ಅಮಾನತುಗೊಳಿಸಿದ ಕುರಿತು ಬಳ್ಳಾರಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ,ಈ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದರು.

ಬಳ್ಳಾರಿ ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಜನಾರ್ಶಿವಾದ ಯಾತ್ರೆ ಹಿನ್ನಲೆಯಲ್ಲಿ ಬಳ್ಳಾರಿ ನಗರಕ್ಕೆ ಸಚಿವರು ಆಗಮಿಸಿದ್ದರು.

Latest Indian news

Popular Stories