ಜ. 19ರಿಂದ ನೀಟ್‌ ಕೌನ್ಸೆಲಿಂಗ್‌ ಆರಂಭ

ಹೊಸದಿಲ್ಲಿ: ಕೊನೆಗೂ ನೀಟ್‌-ಯುಜಿ ಕೌನ್ಸೆಲಿಂಗ್‌ ಜ. 19ರಿಂದ ಆರಂಭವಾಗಲಿದೆ. ಮೆಡಿಕಲ್‌ ಕೌನ್ಸೆಲಿಂಗ್‌ ಕಮಿಟಿಯ ವೆಬ್‌ಸೈಟ್‌ನಲ್ಲಿ ಅಂದಿನಿಂದಲೇ ನೋಂದಣಿ ಪ್ರಾರಂಭವಾಗಲಿದೆ.

ಕೇಂದ್ರ ಸಚಿವ ಮನ್‌ಸುಖ ಮಾಂಡವೀಯ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ವೆಬ್‌ಸೈಟ್‌ ನಲ್ಲಿ ಲಭ್ಯವಿದೆ. ಈ ವರ್ಷ ಅಖೀಲ ಭಾರತ ಕೋಟಾದಡಿ ಶೇ. 15ರಷ್ಟು ಸೀಟು, ಹೊಸ ಇಡಬ್ಲ್ಯುಎಸ್‌ ಮತ್ತು ಒಬಿಸಿ ಕೋಟಾದಡಿ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ.

ವೇಳಾಪಟ್ಟಿ ಪ್ರಕಾರ ಜ. 17 ಮತ್ತು 18ರಂದು ಮೊದಲ ಸುತ್ತಿನ ಸೀಟ್‌ ಮೆಟ್ರಿಕ್ಸನ್ನು ಆಯಾ ಸಂಸ್ಥೆಗಳೇ ಪರಿಶೀಲಿಸಲಿವೆ. ನೋಂದಣಿ, ಶುಲ್ಕ ಪಾವತಿ ಪ್ರಕ್ರಿಯೆ ಜ. 19ರಿಂದ 24ರ ವರೆಗೆ ನಡೆಯಲಿದೆ.

ಸೀಟು ಆಯ್ಕೆ ಜ. 20ರಿಂದ ಜ. 24ರ ವರೆಗೆ, ಆಂತರಿಕ ಅಭ್ಯರ್ಥಿ ಪರಿಶೀಲನೆ ಜ. 25, 26ರಂದು ನಡೆಯಲಿದೆ. ಸೀಟು ಹಂಚಿಕೆ ಜ. 27, 28ರಂದು ಜರಗಲಿದೆ. ಮೊದಲ ಸುತ್ತಿನ ಆಯ್ಕೆ ಪಟ್ಟಿ ಜ. 29ರಂದು ಹೊರಬೀಳಲಿದೆ. ಎಂಸಿಸಿ ಒಟ್ಟು 4 ಸುತ್ತುಗಳಲ್ಲಿ ಸೀಟು ವಿತರಿಸಲಿದೆ.

Latest Indian news

Popular Stories