ಡಾ.ಸಿ.ಎಸ್ ದ್ವಾರಕನಾಥ್ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆ

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತರಾದ ಡಾ.ಸಿ ಎಸ್ ದ್ವಾರಕನಾಥ್ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ಶುಕ್ರವಾರ ಬೆಳಗ್ಗೆ 12.00ಗಂಟೆಗೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಡಾ. ಸಿಎಸ್ ದ್ವಾರಕನಾಥ್ ಅವರು ದಲಿತ,ಹಿಂದುಳಿದ ವರ್ಗ ಹಾಗೂ ಜನಪರ ಹೋರಾಟದಲ್ಲಿ ಸಕ್ರಿಯರಾಗಿದ್ದವರು. ವಕೀಲರಾಗಿಯೂ, ಬರಹಗಾರರಾಗಿಯೂ ಹೆಸರು ಮಾಡಿದವರು. ಈ ಹಿಂದೆ ಸಚಿವ ಶ್ರೀರಾಮುಲು ನೇತೃತ್ವದ ಬಿಎಸ್‌ ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಪಕ್ಷದ ಮಾರ್ಗದರ್ಶಕರಾಗಿ ಹಿಂದುಳಿದ, ಅಲ್ಪಸಂಖ್ಯಾತ ವರ್ಗವನ್ನು ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು, ಪ್ರವಾಸಗಳನ್ನು ಹಮ್ಮಿಕೊಂಡಿದ್ದರು. ಇದಾದ ಬಳಿಕ ಪಕ್ಷದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿ ಬಿಎಸ್‌ಆರ್‌ ತೊರೆದಿದ್ದರು.

ಇದಾದ ಬಳಿಕ ಬಿಎಸ್‌ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಿಎಸ್‌ಪಿಯಿಂದ 2019 ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ಮತದಾನ ಮಾಡುವ ವಿಡಿಯೋವನ್ನು ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು.ಸದ್ಯ ರಾಜಕೀಯವಾಗಿ ಸಕ್ರಿಯ ಆಗಿಲ್ಲದಿದ್ದರೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಇದೀಗ ಸಿ.ಎಸ್ ದ್ವಾರಕನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.

Latest Indian news

Popular Stories