ತಪ್ಪಿದ ಸಚಿವ ಸ್ಥಾನ: ಪಕ್ಷ ನಿಷ್ಠೆಗೆ ಬೆಲೆ ಸಿಗದಿದ್ದಕ್ಕೆ ಅಸಮಾಧಾನ; ಎಂಎಲ್ ಸಿ ಹುದ್ದೆಗೆ ಹರಿಪ್ರಸಾದ್ ರಾಜಿನಾಮೆ?

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಸಂಪುಟ ಸೇರ್ಪಡೆಗೆ ಬಾರೀ ಲಾಬಿ ಏರ್ಪಟ್ಟಿದ್ದು, ಕೊನೆಗೂ 24 ಜನರ ಶಾಸಕರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿದ್ದ ಬಿ.ಕೆ ಹರಿಪ್ರಸಾದ್ ಸಚಿವ ಸ್ಥಾನ ಕೈ ತಪ್ಪಿದ್ದು, ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

16 ವಿವಿಧ ರಾಜ್ಯಗಳಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಪಕ್ಷದ ಕೆಲವರ ನಡೆಯಿಂದ ಅಸಮಾಧಾನಗೊಂಡು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲೂ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಕರಾವಳಿಯಲ್ಲಿ ಬಿಲ್ಲವ ಸಮುದಾಯ ದೊಡ್ಡ ಮಟ್ಟದಲ್ಲಿ ಇರುವುದಿಂದ ಈ ಭಾಗದವರಾಗಿರುವ ಬಿ.ಕೆ ಹರಿ ಪ್ರಸಾದ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇತ್ತು.

ಹರಿಪ್ರಸಾದ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು. ಹರಿಪ್ರಸಾದ್ ಬದಲಿಗೆ ರಾಜು ಸಮುದಾಯಕ್ಕೆ ಸೇರಿದ ಹಾಗೂ ಎರಡೂ ಸದನದ ಸದಸ್ಯರಲ್ಲದ ಎನ್.ಎಸ್.ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.

ರಾಯಚೂರು ಲೋಕಸಭಾ ಸ್ಥಾನದ ಆಕಾಂಕ್ಷಿಯಾಗಿದ್ದ ಬೋಸರಾಜು ಅವರಿಗೆ ರಾಯಚೂರು ನಗರದಿಂದ ಟಿಕೆಟ್ ನಿರಾಕರಿಸಲಾಗಿದ್ದು, ಮತ್ತೋರ್ವ ಆಕಾಂಕ್ಷಿ ಯಾಸಿನ್‌ಗೆ ಅವಕಾಶ ನೀಡಬೇಕೆಂದು ಕೆಲವು ಮುಖಂಡರು ಪಟ್ಟು ಹಿಡಿದಿದ್ದರು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಕಾಂಗ್ರೆಸ್ ನಾಯಕತ್ವ ಭರವಸೆ ನೀಡಿತ್ತು. ಅದರಂತೆ ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಯಾರೇ ಸಚಿವರಾಗಿದ್ದರೂ ಉಭಯ ಸದನಗಳ ಒಂದರಲ್ಲಿ ಸದಸ್ಯರಾಗಿರಬೇಕು ಎಂಬುದು ನಿಯಮ.  ಹೀಗಾಗಿ ಬೋಸರಾಜು ಎಂಎಲ್‌ಸಿಯಾಗಿ ಆಯ್ಕೆಯಾಗಲು ಆರು ತಿಂಗಳ ಕಾಲಾವಕಾಶವಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮುಖ್ಯ ಸಚೇತಕ ಪ್ರಕಾಶ್‌ ರಾಥೋಡ್‌ ಅವರಂತ ಹಲವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು, ಆದರೆ ಹಿರಿಯ ನಾಯಕರಲ್ಲಿ ಯಾರೊಬ್ಬರಿಗೂ ಸ್ಥಾನ ಸಿಗದ ಕಾರಣ ಕಾಂಗ್ರೆಸ್‌ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಲು ಸಾಕಷ್ಟು ಕಸರತ್ತು ನಡೆಸಿದ್ದ ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಕೆಲವರು ಹೊರಗುಳಿದಿದ್ದಾರೆ..

Latest Indian news

Popular Stories