ದ್ವಿತೀಯ ಪಿಯುಸಿ ಪರೀಕ್ಷೆ: ಖಾಸಗಿ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ಇಲ್ಲ – ಸಚಿವ ಬಿ. ಸಿ. ನಾಗೇಶ್

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಮೊದಲ ದಿನ ಶೇ. 94.29 ರಷ್ಟು ವಿದ್ಯಾರ್ಥಿಗಳು ಗುರುವಾರ ಪರೀಕ್ಷೆಗೆ ಹಾಜರಾಗಿದ್ದರು. ಐಚ್ಛಿಕ ಕನ್ನಡ, ಗಣಿತ ಮತ್ತು ಮೂಲ ಗಣಿತ ವಿಷಯಗಳಿಗೆ 333 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. 19 ವಿದ್ಯಾರ್ಥಿಗಳು ಗೈರಾಗಿದ್ದರು. ರಾಜ್ಯದಲ್ಲಿ 85 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, ನಗರದ ಸೈಂಟ್ ಆನ್ಸ್ ಮಹಿಳಾ ಪದವಿ ಪೂರ್ವ ಕಾಲೇಜು ಹಾಗೂ ಕೋಟೆ ವಾಣಿವಿಲಾಸ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ನಾಳೆ ನಡೆಯುವ ಪರೀಕ್ಷೆಯಲ್ಲಿ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಬೋರ್ಡ್ ನಿಂದ ಮಾಡಲ್ಪಟ್ಟಿರುವ ಮೌಲ್ಯಮಾಪನವನ್ನು ತಿರಸ್ಕರಿಸಿ, ಮರು ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಕಡಿಮೆಯಿದೆ ಎಂದು ಅವರು ಹೇಳಿದರು. ಹೆಚ್ಚಿನ ಸಂಖ್ಯೆಯ ಪರೀಕ್ಷಾರ್ಥಿಗಳು ಖಾಸಗಿ ಅಭ್ಯರ್ಥಿಗಳು, ಇವರಿಗೆ ಲಾಕ್‌ಡೌನ್ ಸಮಯದಲ್ಲಿ ಅಧ್ಯಯನ ಮಾಡಲು ಸಾಕಷ್ಟು ಸಮಯ ಇದ್ದರಿಂದ ಗ್ರೇಸ್ ಅಂಕಗಳನ್ನು ನೀಡುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಹೇಳಿದರು.

ಆಗಸ್ಟ್ 23 ರಿಂದ ಆಫ್ಲೈನ್ ​​ತರಗತಿಗಳಿಗೆ ಹಾಜರಾಗಲಿರುವ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಹದಿನೈದು ದಿನಗಳವರೆಗೆ ಪರಿಷ್ಕರಣೆ ತರಗತಿಗಳು ಇರುತ್ತವೆ, ಸುಮಾರು ಒಂದೂವರೆ ವರ್ಷಗಳಿಂದ ತರಗತಿಗಳನ್ನು ವಿದ್ಯಾರ್ಥಿಗಳು ಕಳೆದುಕೊಂಡಿದ್ದಾರೆ. ಶೇ. 50 ರಷ್ಟು ವಿದ್ಯಾರ್ಥಿಗಳು ಮಾತ್ರ ವಿದ್ಯಾಗಮ ಅಥವಾ ವರ್ಚುಯಲ್ ವಿಧಾನಗಳ ಮೂಲಕ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿದೆ. ಇತರರು ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಎಂದು ಅವರು ತಿಳಿಸಿದರು.

1 ರಿಂದ 8ನೇ ತರಗತಿಯ ಆಫ್ ಲೈನ್ ತರಗತಿ ಪುನರಾರಂಭ ಕುರಿತಂತೆ ಆಗಸ್ಟ್ 30 ರ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು, ಈ ಅವಧಿಯಲ್ಲಿ ಪೋಷಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ಹೇಳಿದ ಸಚಿವರು, ಕೋವಿಡ್-19 ಮೂರನೇ ಅಲೆ ಬಗ್ಗೆ ಆತಂಕಬೇಡ ಎಂದು ತಜ್ಞರು ಸಲಹೆ ನೀಡಿರುವುದಾಗಿ ತಿಳಿಸಿದರು.

Latest Indian news

Popular Stories