ವಿವಾಹ ಸಮಾರಂಭದಲ್ಲಿ ದುರಂತ: ಗಂಗೆಪೂಜೆಯ ವೇಳೆ ಬಾವಿಗೆ ಬಿದ್ದು 13 ಮಂದಿ ಮೃತ್ಯು

ಆಸ್ಪತ್ರೆಯಲ್ಲಿರುವ ಪೊಲೀಸ್ ಸಿಬ್ಬಂದಿ ಹಾಗೂ ಗಾಯಾಳುಗಳ ಕುಟುಂಬಸ್ಥರು.By : Manjula VNOnline Desk
ಖುಷಿನಗರ: ಮದುವೆ ಸಮಾರಂಭಕ್ಕೆಂದು ಬಂದು ಗಂಗೆ ಪೂಜೆ ವೇಳೆ ಬಾವಿಯಲ್ಲಿ ಬಿದ್ದು ಮಕ್ಕಳು, ಮಹಿಳೆಯರು ಸೇರಿ 13 ಮಂದಿ ಸಾವನ್ನಪ್ಪಿರುವ ಘಟನೆ ನೆಬುವಾ ನೌರಂಗಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ವಿವಾಹದ ಸಂದರ್ಭದಲ್ಲಿ ಗಂಗೆ ಪೂಜೆ ಮಾಡುವುದು ಕುಟುಂಬದ ಸಂಪ್ರದಾಯವಾಗಿದ್ದು, ಗಂಗೆ ಪೂಜೆಗೆಂದು ಬಾವಿ ಬಳಿ ನೂರಾರು ಜನರು ಸೇರಿದ್ದಾರೆ. ಕೆಲವ ಮಹಿಳೆಯರು ಹಾಗೂ ಮಕ್ಕಳು ಗಂಗೆ ಪೂಜೆಯನ್ನು ಬಾವಿಯ ಮೇಲ್ಚಾವಣಿ ಮೇಲೆ ಕುಳಿತು ನೋಡುತ್ತಿದ್ದರು.

ಬಾವಿಯು ಹಳೆಯದಾಗಿದ್ದು, ಮೇಲ್ಚಾವಣಿ ದುರ್ಬಲವಾಗಿದ್ದರಿಂದ ಕುಸಿದು ಬಿದ್ದಿದೆ. ಪರಿಣಾಮ ಮೇಲ್ಚಾವಣಿ ಮೇಲೆ ಕುಳಿತಿದ್ದ ಮಹಿಳೆಯರು ಹಾಗೂ ಮಕ್ಕಳು ಬಾವಿಗೆ ಬಿದ್ದಿದ್ದಾರೆ. ಬಳಿಕ ಬಾವಿಯೊಳಗೆ ಬಿದ್ದ ತಮ್ಮ ಕುಟುಂಬಸ್ಥರನ್ನು ಕಾಪಾಡಲು ಒಬ್ಬರ ಹಿಂದೆ ಒಬ್ಬರು ಮಹಿಳೆಯರು ಬಾವಿಗೆ ಹಾರಿದ್ದಾರೆ. ಹೀಗೆ ಸುಮಾರು 25ಕ್ಕೂ ಹೆಚ್ಚು ಮಂದಿ ಮಹಿಳೆಯರು ಬಾವಿಗೆ ಬಿದ್ದಿದ್ದಾರೆ.

ಬಳಿಕ ಸ್ಥಳದಲ್ಲಿದ್ದವರು ಕೆಲವರನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಘಟನೆಯಲ್ಲಿ 9 ಮಕ್ಕಳು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 18 ಮಂದಿ ಮಹಿಳೆಯರಿಗೆ ಗಂಭೀರವಾಗಿ ಗಾಯವಾಗಿದ್ದು, ಕೂಡಲೇ ಗ್ರಾಮಸ್ಥರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಗ್ರಾಮಸ್ಥರೊಂದಿಗೆ ರಕ್ಷಣಾ ಕಾರ್ಯ ಕೈಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸದರು. ಬಳಿಕ ಜಿಲ್ಲಾಧಿಕಾರಿ, ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ದುರಂತ ಸಂಭವಿಸಿದ ತಕ್ಷಣವೇ ಆ್ಯಂಬುಲೆನ್ಸ್​ಗೆ ಗ್ರಾಮಸ್ಥರು ಕರೆ ಮಾಡಿದ್ದಾರೆ. ಆದರೆ, ಆ್ಯಂಬುಲೆನ್ಸ್​ ಘಟನಾಸ್ಥಳಕ್ಕೆ ತಲುಪಲು ಸುಮಾರು 2 ಗಂಟೆಗಳ ಕಾಲ ತಡವಾಗಿತ್ತು. ಅದಕ್ಕೂ ಮೊದಲು ಬಂದ ಪೊಲೀಸರು ತಮ್ಮ ವಾಹನದಲ್ಲಿ ಕೆಲ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

Latest Indian news

Popular Stories