ಶಾಲೆಯಲ್ಲಿ ಮೊಟ್ಟೆ ನೀಡಲು ಪೇಜಾವರ ಸ್ವಾಮಿ ವಿರೋಧ

ಉಡುಪಿ: ರಾಜ್ಯದ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಬೇಯಿಸಿದ ಮೊಟ್ಟೆ ಹಾಗೂ ಬಾಳೆಹಣ್ಣು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಕ್ರಮವನ್ನು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಗುರುವಾರ ವಿರೋಧಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಹಾರವು ವ್ಯಕ್ತಿಯ ಆಯ್ಕೆಯಾಗಿದೆ ಮತ್ತು ಅದನ್ನು ಯಾರೂ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರತಿಯೊಂದು ಸಮುದಾಯವೂ ತಮ್ಮದೇ ಆದ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದು, ಮಕ್ಕಳಿಗೆ ಮೊಟ್ಟೆ ನೀಡುವುದು ಸರ್ಕಾರದ ಕೆಲಸವಲ್ಲ ಎಂದರು.

ಶಾಲೆಗಳಲ್ಲಿ ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಹಲವರ ನಂಬಿಕೆಗಳಿಗೆ ಧಕ್ಕೆಯುಂಟಾಗುತ್ತದೆ. ಶಾಲೆ ಇರುವುದು ಶಿಕ್ಷಣ ನೀಡಲೆಂದು. ಯಾವುದೇ ಸಮುದಾಯದ ಜೀವನಶೈಲಿಯನ್ನು ಬದಲಿಸಬಾರದು. ಯಾರಿಗೆ ಯಾವುದನ್ನು ಸೇವಿಸಲು ಇಷ್ಟವಿದೆಯೋ ಅದನ್ನು ಸೇವಿಸಲಿ. ಸರ್ಕಾರ ಅದರ ಖರ್ಚು ವಹಿಸಿಕೊಳ್ಳಲಿ ಎಂದು ಸಲಹೆ ಮಾಡಿದರು.

”ಮೊಟ್ಟೆ ಖರೀದಿಗೆ ಖರ್ಚು ಮಾಡಲು ಉದ್ದೇಶಿಸಿರುವ ಹಣವನ್ನು ಸರ್ಕಾರ ಮರುಪಾವತಿ ಮಾಡಲಿ. ಸಮುದಾಯಗಳ ಜೀವನ ಶೈಲಿ ಮತ್ತು ಪದ್ಧತಿಗಳನ್ನು ಬದಲಾಯಿಸಲು ಶಾಲೆಗಳು ಇಲ್ಲ. ಎಲ್ಲ ಸಮುದಾಯದ ಮಕ್ಕಳು ಶಾಲೆಗಳಲ್ಲಿ ಕಲಿಯುವುದರಿಂದ ಸರ್ಕಾರ ಮೊಟ್ಟೆ ತಿನ್ನುವುದನ್ನು ಕಡ್ಡಾಯ ಮಾಡಬಾರದು ಎಂದರು.

ಇದೇ ವೇಳೆ ರಾಜ್ಯ ಸರ್ಕಾರ ಮಂಡಿಸಿರುವ ಮತಾಂತರ ನಿಷೇಧ ಮಸೂದೆಗೆ ಸಂಬಂಧಿಸಿದಂತೆ ಮಾತನಾಡಿದ ಪೇಜಾವರ ಶ್ರೀಗಳು, ಮತಾಂತರದಿಂದ ಹಲವು ಕುಟುಂಬಗಳು ಹಾಳಾಗಿದ್ದು, ಇತ್ತೀಚಿಗೆ ಮಂಗಳೂರಿನಲ್ಲಿ ಇಡೀ ಕುಟುಂಬವೇ ನಾಶವಾಗಿರುವ ಘಟನೆ ಎಷ್ಟು ಕ್ರೂರವಾಗಿದೆ ಎಂಬುದನ್ನು ತೋರಿಸುತ್ತದೆ. ಇದು ನಿಲ್ಲಬೇಕು. ಹೀಗಾಗಿ ರಾಜ್ಯ ಸರ್ಕಾರ ಶೀಘ್ರವೇ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದರು.

Latest Indian news

Popular Stories