ಅನಿಮೇಟೆಡ್ ವಿಡಿಯೋ ಟ್ವೀಟ್ ಪ್ರಕರಣ: ಬೆಂಗಳೂರು ಪೊಲೀಸರ ನೋಟಿಸ್​ ಸ್ವೀಕರಿಸದ ಅಮಿತ್ ಮಾಳವೀಯ

ಬೆಂಗಳೂರು, ಮೇ 11: ಮುಸ್ಲಿಂ ಮೀಸಲಾತಿ (Muslim Reservation) ಕುರಿತಾದ ಅನಿಮೇಟೆಡ್ ವಿಡಿಯೋ ಟ್ವೀಟ್ ವಿಚಾರಕ್ಕೆ ಸಂಬಂಧಿಸಿ ಹೈಗ್ರೌಂಡ್ಸ್​​ ಠಾಣೆ ಪೊಲೀಸರು (Bengaluru Police) ನೀಡಿದ ನೋಟಿಸನ್ನು ಸ್ವೀಕರಿಸಲು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya) ನಿರಾಕರಿಸಿದ್ದಾರೆ.

ಪಶ್ಚಿಮ ಬಂಗಾಳದ ಕೃಷ್ಣನಗರ ಹೋಟೆಲ್​ನಲ್ಲಿ ಅಮಿತ್ ಮಾಳವೀಯಾರನ್ನು ಭೇಟಿಯಾದ ಬೆಂಗಳೂರಿನ ಹೈಗ್ರೌಂಡ್ಸ್​​ ಠಾಣೆ ಪೊಲೀಸರು ನೋಟಿಸ್ ನೀಡಲು ಮುಂದಾದರು. ಆದರೆ, ಪೊಲೀಸರು ತಂದಿದ್ದ ನೋಟಿಸ್ ಸ್ವೀಕರಿಸದ ಅಮಿತ್ ಮಾಳವೀಯಾ, ಈಗಾಗಲೇ ಇ-ಮೇಲ್ ಮೂಲಕ ನನಗೆ ನೋಟಿಸ್ ಬಂದಿದೆ. ನೋಟಿಸ್​ಗೆ ಉತ್ತರ ನೀಡಲು ಏಳು ದಿನಗಳ ಕಾಲ ಅವಕಾಶ ಇದೆ ಎಂದರು.
ನೋಟಿಸ್​ಗೆ ನಮ್ಮ ವಕೀಲರು ಉತ್ತರ ನೀಡುತ್ತಾರೆ ಎಂದು ಮಾಳವೀಯಾ ಹೇಳಿದರು. ಹೀಗಾಗಿ ನೋಟಿಸ್​ ನೀಡಲು ಹೋಗಿದ್ದ ಹೈಗ್ರೌಂಡ್ಸ್ ಠಾಣೆ ಪೊಲೀಸರು ವಾಪಸಾಗಿದ್ದಾರೆ.

ಟ್ವಿಟರ್​​ನಲ್ಲಿ ಸಮುದಾಯಗಳಿಗೆ ಸಂಬಂಧಿಸಿ ಪೋಸ್ಟ್ ಮಾಡಿದ್ದ ಆರೋಪವನ್ನು ಮಾಳವೀಯ ಎದುರಿಸುತ್ತಿದ್ದಾರೆ. ಟ್ವಿಟರ್​​ನಲ್ಲಿ ಕರ್ನಾಟಕ ಬಿಜೆಪಿ ಘಟಕ ವಿಡಿಯೋ ಪೋಸ್ಟ್ ಮಾಡಿತ್ತು. ಅದರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮುಸ್ಲಿಮರು ಎಂಬಂತೆ ಬಿಂಬಿಸಲಾಗಿತ್ತು.

ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದ ಅನಿಮೇಷನ್ ವಿಡಿಯೋದಲ್ಲಿ ಒಂದು ಗೂಡಿನಲ್ಲಿ 3 ಮೊಟ್ಟೆಗಳಿರುತ್ತವೆ. ಆ ಮೊಟ್ಟೆಗಳನ್ನು SC, ST ಮತ್ತು OBC ಎಂದು ಟ್ಯಾಗ್ ಮಾಡಲಾಗಿದೆ. ಮುಸ್ಲಿಮರನ್ನು ಪ್ರತಿನಿಧಿಸುವ ಮತ್ತೊಂದು ಮೊಟ್ಟೆಯನ್ನು ಆ ಗೂಡಿಗೆ ಸೇರಿಸಲಾಗುತ್ತದೆ. ಆ ಮೊಟ್ಟೆಯೊಡೆದ ನಂತರ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಕೋಳಿಗೆ ಮಾತ್ರ ಆಹಾರ ನೀಡುತ್ತಿರುವುದು ಒಂದು ಸಮುದಾಯದ ಕಡೆಗೆ ಒಲವು ತೋರುತ್ತಿದೆ ಎಂಬುದರ ಸಂಕೇತವಾಗಿತ್ತು.

ಈ ಪೋಸ್ಟ್ ವಿರುದ್ಧ ಕೆಪಿಸಿಸಿ ಕಾನೂನು ಘಟಕದ ರಮೇಶ್ ಬಾಬು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು.

ವಿಡಿಯೋವನ್ನು ತಕ್ಷಣ ತೆಗೆದುಹಾಕುವಂತೆ ಚುನಾವಣಾ ಆಯೋಗ ಕಳೆದ ವಾರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ಗೆ (ಟ್ವಿಟ್ಟರ್​) ಸೂಚಿಸಿತ್ತು.

Latest Indian news

Popular Stories