ಪಾಕಿಸ್ಥಾನದಲ್ಲೇ ನಡೆಯಲಿದೆ ಏಷ್ಯಾಕಪ್ ಕೂಟ

ಹೊಸದಿಲ್ಲಿ: ಈ ವರ್ಷದ ಸೆಪ್ಟೆಂಬರ್‌ ನಲ್ಲಿ ಏಷ್ಯಾ ಕಪ್ ಕೂಟವು ಅತ್ಯಂತ ವಿಶಿಷ್ಟ ರೀತಿಯಲ್ಲಿ ನಡೆಯಲಿದೆ. ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ, ಪಾಕಿಸ್ತಾನವು ಕೂಟದ ಆತಿಥೇಯರಾಗಲಿದೆ ಆದರೆ ಟೀಮ್ ಇಂಡಿಯಾದ ಪಂದ್ಯಗಳು ಪಾಕಿಸ್ತಾನದಿಂದ ದೂರವಿರುವ ತಟಸ್ಥ ಸ್ಥಳದಲ್ಲಿ ನಡೆಯಲಿದೆ.

ಏಷ್ಯಾ ಕಪ್‌ ನ ಆತಿಥ್ಯ ಹಕ್ಕುಗಳ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜಗಳವಾಡುತ್ತಿದ್ದು, ಟೂರ್ನಿಗಾಗಿ ಪಾಕಿಸ್ತಾನಕ್ಕೆ ತೆರಳಲು ಭಾರತ ನಿರಾಕರಿಸಿದೆ. ಆದರೆ ಪಾಕಿಸ್ತಾನವು 2023 ರ ಆವೃತ್ತಿಯ ಆತಿಥ್ಯ ವಹಿಸುವುದಾಗಿ ಹಠಹಿಡಿದು ಕುಳಿತಿದೆ. ಸಂಪೂರ್ಣ ಪಂದ್ಯಾವಳಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಲು ನಿರಾಕರಿಸಿದೆ.

ಇಎಸ್ ಪಿಎನ್ ಕ್ರಿಕ್ ಇನ್ಫೋ ವೆಬ್‌ ಸೈಟ್ ಪ್ರಕಾರ, ಪಿಸಿಬಿ ಮತ್ತು ಬಿಸಿಸಿಐ ಬೇರೆ ದಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಂದರೆ ಪಾಕಿಸ್ತಾನವು ಹೆಚ್ಚಿನ ಪಂದ್ಯಗಳನ್ನು ಆಯೋಜಿಸುತ್ತದೆ, ಆದರೆ ಭಾರತದ ಪಂದ್ಯಗಳು ಮಾತ್ರ ಸಾಗರೋತ್ತರ ತಟಸ್ಥ ಸ್ಥಳದಲ್ಲಿ ನಡೆಯುವ ಸಾಧ್ಯತೆಯಿದೆ. ಸಾಗರೋತ್ತರ ಸ್ಥಳವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಯುಎಇ, ಓಮನ್, ಶ್ರೀಲಂಕಾ ಮತ್ತು ಇಂಗ್ಲೆಂಡ್ ಸಹ ಕನಿಷ್ಠ ಎರಡು ಭಾರತ-ಪಾಕಿಸ್ತಾನ ಸ್ಪರ್ಧೆಗಳು ಸೇರಿದಂತೆ ಐದು ಪಂದ್ಯಗಳನ್ನು ಆಯೋಜಿಸಲು ಸಂಭಾವ್ಯ ಸ್ಪರ್ಧಿಗಳಾಗಿವೆ ಎಂದು ವರದಿ ಹೇಳಿದೆ.

ಆರು ರಾಷ್ಟ್ರಗಳ ಏಷ್ಯಾ ಕಪ್ 2023 ರಲ್ಲಿ ಕ್ವಾಲಿಫೈಯರ್ ತಂಡದೊಂದಿಗೆ ಭಾರತ ಮತ್ತು ಪಾಕಿಸ್ತಾನವು ಒಂದೇ ಗುಂಪಿನಲ್ಲಿದೆ. ಈ ವರ್ಷದ ಸೆಪ್ಟೆಂಬರ್ ಮೊದಲಾರ್ಧದಲ್ಲಿ 50 ಓವರ್ ಗಳ ಸ್ವರೂಪದಲ್ಲಿ ನಡೆಯಲು ಯೋಜಿಸಲಾಗಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಇತರ ಗುಂಪಿನ ಭಾಗವಾಗಿದೆ.

Latest Indian news

Popular Stories