BJP ದೇಶದ ‘ಹೊಸ ಈಸ್ಟ್ ಇಂಡಿಯಾ ಕಂಪನಿ’, ಒಡೆದು ಆಳುವ ನೀತಿ ಅದರ ಡಿಎನ್‌ಎಯಲ್ಲಿದೆ: ಸುರ್ಜೇವಾಲಾ

ಹುಬ್ಬಳ್ಳಿ: ದೇಶದಲ್ಲಿ ಹೊಸ ಈಸ್ಟ್ ಇಂಡಿಯಾ ಕಂಪನಿ ಎಂದರೆ ಅದು ಬಿಜೆಪಿ. ಒಡೆದು ಆಳುವ ನೀತಿ ಅದರ ಡಿಎನ್‌ಎಯಲ್ಲಿದೆ. ಹೇಳುವುದು ಒಂದು, ಮಾಡುವುದು ಮತ್ತೊಂದು. ಇನ್ನು ಮೋದಿ ಪ್ರಧಾನ ಮಂತ್ರಿ ಅಲ್ಲ ಪರಿಧಾನ್ ಮಂತ್ರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಆರೋಪಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ ಈಸ್ಟ್ ಇಂಡಿಯಾ ಕಂಪನಿ ಅಂದರೆ ಅದು ಬಿಜೆಪಿ. ದ್ವಂದ್ವ ನೀತಿ ಪಾಲಿಸುವುದು ಬಿಜೆಪಿ ಡಿ.ಎನ್.ಎ ದಲ್ಲಿದೆ. ಹೇಳುವುದು ಒಂದು, ಮಾಡುವುದು ಮತ್ತೊಂದು. ಮೋದಿ ಅವರೇ ಖುದ್ದು ಖಾಲಿ ಚೊಂಬು. ಮೋದಿ ಪ್ರಧಾನಮಂತ್ರಿ ಅಲ್ಲ ಪರಿಧಾನ್ ಮಂತ್ರಿ. ಪ್ರತಿ ವರ್ಷ ಮೋದಿ ಅವರಿಂದ ಖಾಲಿ ಚೊಂಬು ಗ್ಯಾರಂಟಿ ಕೊಡಲಾಗುತ್ತಿದೆ. ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್ ಸೇರಿ ಎಲ್ಲ ಗ್ಯಾರಂಟಿಗಳಲ್ಲಿ ಚೊಂಬು ಕೊಟ್ಟಿದ್ದಾರೆ. ಕಳೆದ 10 ವರ್ಷದಲ್ಲಿ ಮೋದಿ ಏನು ಮಾಡಿಲ್ಲ. ಜನರಿಗೆ ವಂಚನೆ ಮಾಡುವ ಕೆಲಸ ಮಾಡಿದ್ದಾರೆ. ಇದು ನಾಚಿಕೆಗೇಡಿನ ವರ್ತನೆ. ಈ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿದ್ದರಾಗಿದ್ದೇವೆ. ಬೇಕಾದರೆ ಪತ್ರಕರ್ತರೆ ಜಡ್ಜ್ ಆಗಲಿ. ಸ್ಥಳವನ್ನು ಅವರೇ ನಿಗದಿ ಮಾಡಲಿ. ಸಿಎಂ, ಡಿಸಿಎಂ ಸೇರಿ ನಮ್ಮ ಸಚಿವರು, ಮುಖಂಡರು ಚರ್ಚೆಗೆ ಸಿದ್ಧರಾಗಿದ್ದಾರೆ ಎಂದು ಹೇಳಿದರು.

10 ವರ್ಷಗಳ ಅಧಿಕಾರಾವಧಿಯಲ್ಲಿ ಮೋದಿ ಅವರಿಗೆ ಹೇಳಲು ಏನೂ ಇಲ್ಲದ ಕಾರಣ, ಈಗ ಹಿಂದೂ-ಮುಸ್ಲಿಂ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಮೋದಿ ಅವರು ಭರವಸೆ ಮತ್ತು ದೂರದೃಷ್ಟಿಯ ಮೇಲೆ 2014 ರಲ್ಲಿ ಅಧಿಕಾರಕ್ಕೆ ಬಂದರು, ಆದರ, ಭರವಸೆಗಳನ್ನು ಈಡೇರಿಸದೆ, ಇದೀಗ ದ್ವೇಷವನ್ನು ಹರಡುತ್ತಿದ್ದಾರೆ. 2014ರಲ್ಲಿ ನೀಡಿದ್ದ ಯಾವುದಾದರು ಭರವಸೆಯನ್ನು ಬಿಜೆಪಿ ಈಡೇರಿಸಿದೆಯೇ. ಅದು ಸ್ವಾಮಿನಾಥನ್ ವರದಿ ಅನುಷ್ಠಾನವಿರಲಿ, ವಿದೇಶಗಳಿಂದ ಕಪ್ಪು ಹಣ ತಂದು ಜನರಿಗೆ ಹಂಚುವುದದಿರಲಿ ಯಾವುದು ಮಾಡಿದ್ದಾರೆ. ಅವರು ಮಾಡಿದ್ದು ಒಂದೇ, ಭಾವನೆಗಳನ್ನು‌ ಕೆರಳಿಸುವುದು, ಬ್ರಿಟಿಷ ರಂತೆ ಒಡೆದಾಳುವ ನೀತಿ ಅನುಸರಿಸುವುದು. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡು ಮಾಡೆಲ್ ನಲ್ಲಿ ನಡೆಯುತ್ತಿದೆ ಒಂದು ಕಾಂಗ್ರೆಸ್ ನ ಗ್ಯಾರಂಟಿ ಇನ್ನೊಂದು ಬಿಜೆಪಿಯ ಖಾಲಿ ಚೊಂಬು. ಪ್ರಧಾನಿಯವರು ಸುಮಾರು 73 ಸಾರ್ವಜನಿಕ ಉದ್ಯಮ ಗಳನ್ನು ಖಾಸಗಿ ತೆಕ್ಕೆಗೆ ನೀಡಿದ್ದಾರೆ. 100ಕ್ಕೂ ಹೆಚ್ಚು ವಿಮಾನ ನಿಲ್ದಾಣ, ಬಂದರುಗಳು ಕೆಲವರ ಕೈಗೆ ಬೀಡಲಾಗಿದೆ.

ಮೋದಿಯವರು ಆಗೊಮ್ಮೆ ಈಗೊಮ್ಮೆ ತಮ್ಮ ಉಡುಪನ್ನು ಬದಲಾಯಿಸುವ ಪರಿಧನ್ ಮಂತ್ರಿಯಾಗಿ ಬದಲಾಗಿದ್ದಾರೆ. ಪ್ರಧಾನಿ ಕಚೇರಿಯ ಪ್ರತಿಷ್ಠೆಯನ್ನು ಕಡಿಮೆ ಮಾಡಿದ್ದಾರೆ, ಇದು ಅತ್ಯಂತ ವಿಷಾದನೀಯವಾಗಿದೆ ಎಂದು ತಿಳಿಸಿದರು.

ಸಂವಿಧಾನದ ವಿರುದ್ಧ ವ್ಯವಸ್ಥಿತ ದಾಳಿ ನಡೆಯುತ್ತಿದ್ದು, ಬಿಜೆಪಿ ಸರಕಾರವು ಜನರ ಮತದಾನದ ಹಕ್ಕು, ಮೀಸಲಾತಿ ಮತ್ತು ಇತರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಬಿಜೆಪಿ ಸರ್ಕಾರವು ಎಸ್‌.ಸಿ, ಎಸ್‌.ಟಿ ಮೀಸಲಾತಿ ಮೇಲೆ ದಾಳಿ ಮಾಡಿದೆ. ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನಾಗಿ ಖಾಸಗಿ ವ್ಯಕ್ತಿಗಳನ್ನು ನೇಮಿಸುವ ಮೂಲಕ ಆ ಹುದ್ದೆಗಳಿಗೆ ಎಸ್‌.ಸಿ, ಎಸ್‌.ಟಿ ಅಧಿಕಾರಿಗಳು ಬರದಂತೆ ತಡೆದಿದ್ದಾರೆ. ಸರ್ಕಾರಿ ಸ್ವಾಮ್ಯದ 73 ಕಂಪನಿಗಳನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸಿದೆ. ಇಲ್ಲಿದ್ದ 12 ಲಕ್ಷ ಉದ್ಯೋಗಗಳು ಇಲ್ಲದಂತಾಗಿದೆ. ಇದರಲ್ಲಿ ಎಸ್‌.ಸಿ, ಎಸ್‌.ಟಿ, ಹಿಂದುಳಿದ ವರ್ಗಗಳ ಪಾಲಿನ ಹುದ್ದೆಗಳು ಕಳೆದುಹೋಗಿವೆ’ ಎಂದು ಹೇಳಿದರು.

ಮೋದಿ ಸರ್ಕಾರ ಬರ ಪರಿಹಾರ ಸೇರಿದಂತೆ ಅಗತ್ಯ ಹಣ ಬಿಡುಗಡೆ ಮಾಡದೆ ಕರ್ನಾಟಕಕ್ಕೆ ಮೋಸ ಮಾಡಿದೆ, -ರಾಜ್ಯ ಜನತೆ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಹೊರಟಿದೆ ಎಂದು ಆರೋಪಿಸಿದರು.

Latest Indian news

Popular Stories