
ರಾಜಕೀಯ ಲಾಭದ ಲೆಕ್ಕಾಚಾರ ಬದಿಗಿಟ್ಟು ಪ್ರಾಮಾಣಿಕವಾಗಿ ಸರಕಾರ ಜಾತಿಜನಗಣತಿ ವರದಿ ಬಿಡುಗಡೆ ಮಾಡಲಿ :ತಾಹೇರ್ ಹುಸೇನ್
ಬೆಂಗಳೂರು: ಜಾತಿ ಜನಗಣತಿಗೆ ಸಂಬಂದಿಸಿ ವರದಿ ವಿಚಾರದಲ್ಲಿ ಸರಕಾರ ರಾಜಕೀಯ ಲಾಭದ ಲೆಕ್ಕಾಚಾರ ಬದಿಗಿಟ್ಟು ಪ್ರಾಮಾಣಿಕವಾಗಿ ವರದಿ ಬಿಡುಗಡೆಗೊಳಿಸಲಿ ಎಂದು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಆಗ್ರಹಿಸಿದ್ದಾರೆ.
ಅವರು ಮಾತನಾಡುತ್ತಾ ವರದಿ ನೋಡದೆ ಅವೈಜ್ಞಾನಿಕ ಎಂದು ಹೇಳುತ್ತಿರುವ ಬಿಜೆಪಿ ವರದಿ ಬಗ್ಗೆ ಆತಂಕಪಡುತ್ತಿರುವುದೇಕೆ? ವರದಿ ನೋಡಿದ ಬಳಿಕ ಪ್ರತಿಕ್ರಿಯಿಸಲಿ. ನ್ಯಾಯ ಸಮ್ಮತವಾಗಿ ಎಲ್ಲಾ ವರ್ಗದ ಜನರಿಗೆ ಜನಸಂಖ್ಯೆಗೆ ಅನುಗುಣವಾಗಿ ಅವಕಾಶ ಸಿಗಬೇಕಲ್ಲವೇ? ವರದಿಯಲ್ಲಿ ಏನಿದೆಯೆಂದು ಸರಿಯಾಗಿ ತಿಳಿಯದೆ ತರಾತುರಿಯಿಂದ ಪ್ರತಿಕ್ರಿಯೆ ನೀಡುವುದಾದರೂ ಏಕೆ? ಈ ಬಗ್ಗೆ ವ್ಯಾಪಕವಾಗಿ ಸುಳ್ಳು ಸುದ್ದಿ ಬಿತ್ತರಿಸಿ ಜಾತಿಗಳ ನಡುವೆ ಒಡಕು ಮೂಡಿಸುವ ಪ್ರಯತ್ನ ವೂ ನಡೆಯುತ್ತಿದೆ. ಹೀಗಿರುವಾಗ ” ಇದು ಜಾತಿ ಜನಗಣತಿಯಲ್ಲ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯಾಗಿದೆ. ಸಮೀಕ್ಷೆಯಲ್ಲಿ 40 ದಿನಗಳ ಕಾಲ ಮನೆಮನೆಗೆ ತೆರಳಿ ಪ್ರತಿಯೊಬ್ಬರ ಜಾತಿ ಲಿಂಗ ಧರ್ಮ ಆಸ್ತಿ ಪಾಸ್ತಿ ವಿವರಗಳಿಗಾಗಿ 55 ಪ್ರಶ್ನೆಗಳನ್ನು ಕೇಳಿ ಅಂಕಿ ಅಂಶಗಳ ಸಹಿತ ವರದಿ ಸಿದ್ದಪಡಿಸಲಾಗಿದೆ. 2019 ರಲ್ಲಿ ಮೂಲ ಪ್ರತಿಯಿತ್ತು” ಎಂದು ವರದಿ ಸಿದ್ದಪಡಿಸಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ರೂ ಹೈಕೋರ್ಟ್ ವಕೀಲರೂ ಆದ ಕಾಂತರಾಜ್ ಅವರೇ ಮಾಧ್ಯಮಗಳ ಮುಂದೆ ಹೇಳಿರುವಾಗ ಸಮಸ್ಯೆ ಸ್ರಷ್ಟಿಸುವುದಾದರೂ ಏಕೆ.? ವರದಿ ನೋಡದೆ ಅವೈಜ್ಞಾನಿಕ ಎನ್ನುತ್ತಿರುವುದು ಸರಿಯಲ್ಲ. ಆದ್ದರಿಂದ ಸರಕಾರ ಕೂಡಾ ಇದರಲ್ಲಿ ರಾಜಕೀಯ ಲಾಭದ ಲೆಕ್ಕಾಚಾರ ಬದಿಗಿಟ್ಟು ಪ್ರಾಮಾಣಿಕ ವಾಗಿ ವರದಿಯನ್ನು ಬಿಡುಗಡೆ ಮಾಡಲಿ. ಎಂದು ಅವರು ಆಗ್ರಹಿಸಿದರು.




