ಚಿತ್ರದುರ್ಗ: ಸರ್ಕಾರಿ ಬಸ್​ ಮತ್ತು ಲಾರಿ ಮಧ್ಯೆ ಅಪಘಾತ- ಐವರ ಸಾವು; ಆ್ಯಕ್ಸಿಡೆಂಟ್ ನಂತರ 1 ಕಿ.ಮೀ ಸಾಗಿಬಂದ ಬಸ್ಸು!

ಹಿರಿಯೂರು: ಚಿತ್ರದುರ್ಗದ ಚಳ್ಳಕೆರೆ ತಾಲೂಕು ಕೇಂದ್ರದಿಂದ ಹಿರಿಯೂರಿಗೆ ಸಾಗುವ, ಬೀದರ್ – ಶ್ರೀರಂಗಪಟ್ಟಣ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ ನಂಬರ್ 14ರಲ್ಲಿ) ಕೆಎಸ್ ಆರ್ ಟಿಸಿ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಐದು ಮಂದಿ ಸಾವನ್ನಪ್ಪಿದ್ದಾರೆ.  

ಮೃತರನ್ನು ಬೆಂಗಳೂರು ಮೂಲದ ಪಾರ್ವತಮ್ಮ(45) , ಮಸ್ಕಿಯ ರಮೇಶ್(40)‌,  ರಾಯಚೂರಿನ ಮಾಬಮ್ಮ, ಮಾನ್ವಿಯ ನರಸಣ್ಣ ಎಂದು ಗುರುತಿಸಲಾಗಿದೆ. ಇನ್ನೂ ಒಬ್ಬರ ಗುರುತು ಪತ್ತೆಯಾಗಿಲ್ಲ.

ಗಾಯಗೊಂಡ ಎಂಟು ಜನರಲ್ಲಿ ಐವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರಿಗೆ ಚಳ್ಳಕೆರೆ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಯಾಣಿಕರ ಪ್ರಕಾರ, ಕೆಕೆಆರ್‌ಟಿಸಿ ಚಾಲಕ ಅತಿವೇಗ ಮತ್ತು ನಿರ್ಲಕ್ಷತನದಿಂದ ಬಸ್ಸನ್ನು ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ನಿಧಾನವಾಗಿ ಚಲಿಸುತ್ತಿದ್ದ ಲಾರಿ ಹಿಂದಿಕ್ಕಲು ಯತ್ನಿಸಿದ ವೇಳೆ ಅಪಘಾತ ಸಂಭವಿಸಿದೆ, ಬಸ್ಸಿನ ಎಡಭಾಗ ಸಂಪೂರ್ಣ ಜಖಂಗೊಂಡಿದೆ.

ಡಿಕ್ಕಿಯ ರಭಸಕ್ಕೆ ಬಸ್ ನ ಮುಂದಿನ ಸೀಟುಗಳಲ್ಲಿ ಕುಳಿತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಅಪಘಾತದ ಬಳಿಕ ಲಾರಿ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಹಿರಿಯೂರು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories