ಡಿಸಿಎಂ ವಿಚಾರ: ಬಹಿರಂಗ ಹೇಳಿಕೆ ನೀಡದಂತೆ ಸಚಿವರಿಗೆ ಸಿಎಂ ಸಿದ್ದರಾಮಯ್ಯ ತಾಕೀತು!

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಸಚಿವರು ಬಹಿರಂಗವಾಗಿಯೇ ಹೇಳುತ್ತಿದ್ದು, ಸಾರ್ವಜನಿಕವಾಗಿ ಇಂತಹ ಯಾವುದೇ ರೀತಿಯ ಹೇಳಿಕೆ ನೀಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಿಎಂ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ವಿಷಯದ ಬಗ್ಗೆ ಇನ್ನು ಮುಂದೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೆಚ್ಚುವರಿ ಡಿಸಿಎಂ ಬಗ್ಗೆ ಸಾರ್ವಜನಿಕ ಹೇಳಿಕೆಗಳು ಸರ್ಕಾರ ಮತ್ತು ಕಾಂಗ್ರೆಸ್‌ನ ವರ್ಚಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಸಿದ್ದರಾಮಯ್ಯ ಅವರು ಸಚಿವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹೆಚ್ಚುವರಿ ಡಿಸಿಎಂ ಹುದ್ದೆಗೆ ಬೇಡಿಕೆ ಇಡುತ್ತಿರುವ ತಮ್ಮ ಸಹೋದ್ಯೋಗಿಗಳು ಪಕ್ಷದ ಹೈಕಮಾಂಡ್ ಜೊತೆ ಮಾತನಾಡುವಂತೆ ಹೇಳಿದ್ದಾರೆ.

“ಮಾಧ್ಯಮಗಳು ಪ್ರಚಾರವನ್ನು ಮಾತ್ರ ನೀಡಬಲ್ಲವು ಮತ್ತು ಪರಿಹಾರ ನೀಡುವುದಿಲ್ಲ. ನಮ್ಮ ಪಕ್ಷದ ವಿಷಯಗಳ ಬಗ್ಗೆ ನಮ್ಮ ಪಕ್ಷದ ಕೆಲವರು ಮಾಧ್ಯಮಗಳ ಮುಂದೆ ಮಾತನಾಡುವ ಅಗತ್ಯವಿಲ್ಲ. ನಾನು ಕೂಡ ಮಾಧ್ಯಮಗಳಲ್ಲಿ ಅದರ ಬಗ್ಗೆ ಮಾತನಾಡುವುದಿಲ್ಲ. ಅವರು ಹೈಕಮಾಂಡ್‌ಗೆ ತೆರಳಿ ತಮ್ಮ ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ರಾಜಣ್ಣ ಅವರ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಅವರಿಗೆ ಒಳ್ಳೆಯದು ಆಗಲಿ, ಅವರು ಯಾರನ್ನಾದರೂ ಸಂಪರ್ಕಿಸಲಿ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಲಿ” ಎಂದು ಹೇಳಿದರು. ವಿವಿಧ ಸಮುದಾಯಗಳ ನಡುವೆ ಅಧಿಕಾರ ಹಂಚಿಕೊಳ್ಳಲು ಹೆಚ್ಚುವರಿ ಡಿಸಿಎಂ ಸೃಷ್ಟಿಸಬೇಕು. ಇದು ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ರಾಜಣ್ಣ ಹೇಳಿದ್ದರು.

Latest Indian news

Popular Stories