ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ವಿವೇಕ ಇರುವವರು ಈ ರೀತಿ ಮಾತನಾಡೋಲ್ಲ, ಮಾನಸಿಕವಾಗಿ ಸ್ಥಿರವಾಗಿರುವವರು ಹೆಗಡೆ ಅವರಂತೆ ಮಾತನಾಡುವುದಿಲ್ಲ, ತಾವು ಮಾತನಾಡಿರುವ ರೀತಿ ತಪ್ಪು ಎಂದು ಅವರು ಅರ್ಥ ಮಾಡಿಕೊಳ್ಳಬೇಕು ಅವರ ಪಕ್ಷದ ಮುಖಂಡರೇ ಅನಂತ್ ಕುಮಾರ್ ಹೆಗಡೆ ಆರೋಗ್ಯದ ಬಗ್ಗೆ ಮಾತನಾಡುತ್ತಿರುತ್ತಾರೆ, ಈ ನಿಟ್ಟಿನಲ್ಲಿ ಅವರ ಆರೋಗ್ಯದ ಬಗ್ಗೆ ಅವರು ಗಮನ ಕೊಡಲಿ ಎಂದು ಹೇಳಿದರು.
ಭಟ್ಕಳ, ಶಿರಸಿ, ಶ್ರೀರಂಗಪಟ್ಟಣ ಎಲ್ಲಾ ಮಸೀದಿಗಳು ದೇವಸ್ಥಾನಗಳಾಗಿದ್ದವು. ಈ ಮಸೀದಿಗಳನ್ನು ಒಡೆಯುತ್ತೇವೆ. ಇದನ್ನು ಬೆದರಿಕೆ ಅಂತಾನೇ ತಿಳಿದುಕೊಳ್ಳಿ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರಿಗೆ ಏಕವಚನದಲ್ಲಿ ನಿಂದಿಸಿದ್ದರು. ಹೆಗಡೆ ನೀಡಿರುವ ಹೇಳಿಕೆ ಅವರದೇ ಆಗಿದ್ದು, ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.