‘ಬಡವರು, ದಲಿತರು -ಆದಿವಾಸಿಗಳನ್ನು ತುಳಿಯುತ್ತಿರುವ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಸಮರ ಸಾರುವ ಸಮಯ ಬಂದಿದೆ’

ರಾಂಚಿ: ಬಡವರು, ದಲಿತರು ಮತ್ತು ಆದಿವಾಸಿಗಳನ್ನು ತುಳಿಯುತ್ತಿರುವ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಸಮರ ಸಾರುವ ಸಮಯ ಬಂದಿದೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ಕಾರ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.

ಇ.ಡಿ ಬಂಧನಕ್ಕೂ ಮುನ್ನ ಸೊರೇನ್ ಅವರು ನೀಡಿದ ವಿಡಿಯೊ ಸಂದೇಶದಲ್ಲಿ, ‘ಈ ಬೆದರಿಕೆಗೆಲ್ಲ ನಾನು ಹೆದರುವುದಿಲ್ಲ, ಅಂತಿಮವಾಗಿ ಸತ್ಯಕ್ಕೆ ಗೆಲುವು ಸಿಗಲಿದೆ’ ಎಂದು ಹೇಳಿದ್ದಾರೆ. ಇ.ಡಿ ಅಧಿಕಾರಿಗಳು ನನ್ನನ್ನು ಬಂಧಿಸಲು ಬಂದಿದ್ದಾರೆ. ದಿನವಿಡೀ ಪ್ರಶ್ನೆ ಮಾಡಿದ ಬಳಿಕ ಯೋಜಿತ ರೀತಿಯಲ್ಲಿ ಬಂಧಿಸಿದ್ದಾರೆ. ನಾನು ಯಾವುದೇ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಇ.ಡಿ ಬಳಿ ಯಾವುದೇ ಪುರಾವೆಗಳಿಲ್ಲ. ಆದರೂ ದೆಹಲಿಯ ನನ್ನ ನಿವಾಸದ ಮೇಲೆ ದಾಳಿ ನಡೆಸುವ ಮೂಲಕ ನನ್ನ ಹೆಸರಿಗೆ ಕಳಂಕ ತಂದಿದ್ದಾರೆ’ ಎಂದು ಹೇಳಿದ್ದಾರೆ.

ಸುಮಾರು 600 ಕೋಟಿ ರು. ಮೊತ್ತದ ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೂರೇನ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ. ಬುಧವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್ ಸೊರೇನ್‌ ಅವರು ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಅವರನ್ನು ಬಂಧಿಸಿತ್ತು.

ಈ ನಡುವೆ ಜಾರ್ಖಂಡ್‌ನಲ್ಲಿ ಆಡಳಿತಾರೂಢ ಮೈತ್ರಿಕೂಟದ ನೇತೃತ್ವ ವಹಿಸಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಶಾಸಕಾಂಗ ಪಕ್ಷದ ನಾಯಕನಾಗಿ ಹಿರಿಯ ನಾಯಕ ಚಂಪೈ ಸೊರೇನ್‌ ಸರ್ವಾನುಮತದಿಂದ ಆಯ್ಕೆಯಾಗಿದ್ದು, ಸರ್ಕಾರ ರಚಿಸಲು ಹಕ್ಕು ಪ್ರತಿಪಾದಿಸಿದ್ದಾರೆ. ಹೇಮಂತ್ ಸೊರೆನ್ ಅವರ ಅಧಿಕೃತ ನಿವಾಸದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಏಳು ಗಂಟೆಗಳ ಕಾಲ ಮ್ಯಾರಥಾನ್ ವಿಚಾರಣೆ ನಡೆಸಿದ ನಂತರ ಬಂಧಿಸಲಾಯಿತು.

Latest Indian news

Popular Stories